ಹೀಗೇಯೇ ಮುಂದುವರಿದರೆ, ಜಪಾನಿಯರಂತೆ ಕನ್ನಡಿಗರ ಸಂಖ್ಯೆಯೂ ಕುಸಿಯಲಿದೆ!

ಜಪಾನ್ ಅಂದ ಕೂಡಲೇ ನಮ್ಮ ಕಣ್ಣ ಮುಂದೆ ಏನು ಬರುತ್ತೆ ?

ಸೋನಿ, ಟೊಯೊಟಾ, ಸುಜುಕಿ ತರಹದ ಎಲೆಕ್ಟ್ರಾನಿಕ್ ಮತ್ತು ಆಟೋಮೊಬೈಲ್ ರಂಗದಲ್ಲಿ ಜಗತ್ತಿನ ಮನಸೂರೆಗೊಂಡ ಉತ್ಪನ್ನಗಳನ್ನು ಸೃಷ್ಟಿಸಿದ ಸಂಸ್ಥೆಗಳು ನೆನಪಿಗೆ ಬರಬಹುದು. ಶ್ರಮದ ಬಲದ ಮೇಲೆ ಇಂತಹದೊಂದು ಯಶಸ್ಸಿನ ಸಮಾಜ ಕಟ್ಟಿಕೊಳ್ಳುವುದಕ್ಕೆ ಬೇಕಿದ್ದ ಒಳ್ಳೆಯ ಕಲಿಕೆ, ದುಡಿಮೆ, ಸಾಧಿಸುವ ಛಲ ಮತ್ತು ಜಪಾನಿಯರ ನಡುವಿನ ಒಗ್ಗಟ್ಟು, ಎಲ್ಲವೂ ಅವರ ನಾಡಲ್ಲಿತ್ತು. ಅದಿಲ್ಲದಿದ್ದಲ್ಲಿ ಎರಡನೆಯ ಮಹಾಯುದ್ದದಲ್ಲಿ ಅಣುಬಾಂಬ್ ಹೊಡೆತಕ್ಕೆ ಸಿಕ್ಕಿ ಸರ್ವನಾಶವಾಗಿದ್ದ ಒಂದು ನಾಡು ಇವತ್ತು ಜಿ7 ಗುಂಪಿನ ಸದಸ್ಯರಲ್ಲೊಂದಾಗುವ ಬದಲಾವಣೆ ಸಾಧ್ಯವಿರಲಿಲ್ಲ. ಆದರೆ ಇಂದು ಜಪಾನ್ ಒಂದು ದೊಡ್ಡ ಸಮಸ್ಯೆಯ ಮಡುವಿನಲ್ಲಿದೆ. ಇಲ್ಲ, ಅದು ಕಲಿಕೆ, ದುಡಿಮೆ, ಛಲ ಮತ್ತು ಒಗ್ಗಟ್ಟಿನ ಕೊರತೆಯಲ್ಲ. ಅದು ಅವರಲ್ಲಿ ದೇಶ ಮತ್ತು ಕಾಲದಲ್ಲಿ ಎಂದಿಗೂ ಅಳಿಸದಷ್ಟು ಚೆನ್ನಾಗಿ ಮನೆ ಮಾಡಿದೆ. ಅವರಿಂದು ಎದುರಿಸುತ್ತಿರುವುದು ಒಂದು ದೇಶದ ಆರ್ಥಿಕತೆಯನ್ನು ಮುಂದಕ್ಕೆ ಒಯ್ಯಲು ಹೆಗಲು ಕೊಡಬೇಕಾದ ಜಪಾನಿ ಯುವಕರ ಜನಸಂಖ್ಯೆಯ ಕೊರತೆ, ಜನಸಂಖ್ಯೆ ಬೆಳವಣಿಗೆಯ ಅಳತೆಯಾದ ಟಿ.ಎಫ್.ಆರ್ ಪ್ರಮಾಣ 1.41ರ ಪ್ರಮಾಣದಲ್ಲಿದ್ದು ಅರ್ಥ ವ್ಯವಸ್ಥೆಯ ಬೆಳವಣಿಗೆಗೆ ಕೊಡುಗೆ ನೀಡಲು ಬೇಕಾದಷ್ಟು ಯುವಕರ ಸಂಖ್ಯೆಯೇ ಅಲ್ಲಿ ಇಲ್ಲದಂತಾಗಿದೆ.


ಏನಿದು ಟಿ . ಎಫ್ . ಆರ್ ಪ್ರಮಾಣ?
ಟಿ.ಎಫ್.ಆರ್ ಅನ್ನುವುದು ಟೋಟಲ್ ಫರ್ಟಿಲಿಟಿ ರೇಟ್ ( ಕನ್ನಡದಲ್ಲಿ ಹೆರುವೆಣಿಕ ಅಂತ ಕರೆಯಬಹುದು ) ಅನ್ನುವುದರ ಚಿಕ್ಕದಾಗಿಸಿದ ರೂಪ. ಒಂದು ಕುಟುಂಬದಲ್ಲಿ ಹೆಣ್ಣಿಗೆ ಅವಳ ಜೀವಿತಾವಧಿಯಲ್ಲಿ ಸರಾಸರಿ ಎಷ್ಟು ಮಕ್ಕಳಾಗುತ್ತವೆ ಅನ್ನುವುದರ ಅಳತೆಗೋಲಾಗಿ ಹೆರುವೆಣಿಕೆ ಬಳಸುತ್ತಾರೆ. ಅಂದರೆ ಒಂದು ಕುಟುಂಬದಲ್ಲಿ ಗಂಡ ಹೆಂಡತಿಯಿದ್ದು ಅವರಿಗೆ ಮೂರು ಮಕ್ಕಳಾಗಿದ್ದರೆ ಹೆರುವೆಣಿಕೆಯನ್ನು ಮೂರೆಂದು ಕರೆಯಬಹುದು. ಹೆರುವೆಣಿಕೆಗಿಂತಲೂ ಜನಸಂಖ್ಯೆ ಏರದೇ, ಇಳಿಯದೇ ಸಮತೋಲನ ಸಾಧಿಸಲು ಬೇಕಿರುವ ಹೆರುವೆಣಿಕ ( Replacement TFR ) ಎಷ್ಟಿರಬೇಕು ಅನ್ನುವುದು ಮುಖ್ಯವಾಗುತ್ತೆ. ಅಂದರೆ ಒಂದು ಕುಟುಂಬದಲ್ಲಿ ಗಂಡ ಹೆಂಡತಿಯಿದ್ದರೆ ಅವರ ಕಾಲದ ನಂತರ ಜನಸಂಖ್ಯೆ ಏರದೇ ಇಳಿಯದೇ ಇರುವಷ್ಟೇ ಇರಲು ಅವರ ಜಾಗ ತುಂಬಲು ಎಷ್ಟು ಮಕ್ಕಳಾಗಬೇಕು ಅನ್ನುವ ಲೆಕ್ಕ. ಇದಕ್ಕೆ ಉತ್ತರ ಸುಲಭವಿದೆ. ತಂದೆಯ ಜಾಗ ತುಂಬಲು ಒಂದು ಮಗು, ತಾಯಿಯ ಜಾಗ ತುಂಬಲು ಇನ್ನೊಂದು ಮಗು, ಅಂದರೆ ಎರಡು ಮಕ್ಕಳಾಗುವುದು. ಇದನ್ನೇ ಒಂದು ಜನಾಂಗಕ್ಕೆ ವಿಸ್ತರಿಸುವಾಗ ಇನ್ನು ಕೆಲ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುತ್ತಾರೆ. ತಡವಾಗಿ ಆಗುವ ಮದುವೆ, ತಡವಾಗಿ ಹುಟ್ಟುವ ಮಕ್ಕಳು , ಹುಟ್ಟಿದ ಮಕ್ಕಳು ಚಿಕ್ಕ ವಯಸ್ಸಿನಲ್ಲೇ ತೀರಿ ಹೋಗುವ ಸಂದರ್ , ಆ ಸಮಾಜದಲ್ಲಿ ಆಗುವ ನರೆ, ಬರ, ಯುದ್ದಗಳಿಂದಾಗಿ ಜನಸಂಖ್ಯೆಯ ಮೇಲಾಗುವ ಪರಿಣಾಮ ಇತ್ಯಾದಿ ಅಂಶಗಳೆಲ್ಲವನ್ನು ಪರಿಗಣಿಸಿ ಒಂದು ಜನಾಂಗ ಜನಸಂಖ್ಯೆಯ ಸಮತೋಲನ ಸಾಧಿಸಲು ಇರಬೇಕಾದ ಹೆರುವೆಣಿಕೆ ಪ್ರಮಾಣ 2.1 ಎಂದು ನಿರ್ಧರಿಸಲಾಗಿದೆ. ಈ ಪ್ರಮಾಣವನ್ನು ಜಗತ್ತಿನ ಬಹುತೇಕ ದೇಶಗಳು ಒಪ್ಪಿ , ಇದಕ್ಕೆ ಪೂರಕವಾಗುವಂತೆ ತಮ್ಮ ಜನಸಂಖ್ಯಾ ನೀತಿಗಳನ್ನು ರೂಪಿಸಿಕೊಳ್ಳುತ್ತಿವೆ.
ಜಪಾನ್ ಎಡವಿದ್ದೆಲ್ಲಿ ?
1950ರ ಆಸುಪಾಸಿನಲ್ಲಿ ಜಪಾನಿನ ಹೆರುವೆಣಿಕೆ 2.75ರಷ್ಟಿತ್ತು . 1960ರ ಹೊತ್ತಿಗೆ ಅದು ಸಮತೋಲನದ ಮಟ್ಟ ತಲುಪಿತ್ತು . ಅಲ್ಲಿಂದ 1975ರವರೆಗೂ ಅದು 2.1ರ ಮಟ್ಟದಲ್ಲೇ ಇತ್ತು . ಅದರಿಂದಾಚೆ ಕುಸಿಯಲು ಆರಂಭಿಸಿದ ಹೆರುವೆಣಿಕೆ 2013ರ ಹೊತ್ತಿಗೆ 1.4ಕ್ಕೆ ಬಂದು ನಿಂತಿದೆ . ಜಪಾನಿನ ಅರ್ಥವ್ಯವಸ್ಥೆಯ ಬೆಳವಣಿಗೆಯೂ ಹೆರುವೆಣಿಕೆಯ ಕುಸಿತದ ಜೊತೆಯಲ್ಲೇ ಕುಸಿತಕ್ಕೆ ಒಳಗಾದದ್ದು ಖಂಡಿತ ಕಾಕತಾಳೀಯವಲ್ಲ . ಕಳೆದ ಮೂವತ್ತು ವರ್ಷಗಳಲ್ಲಿ ಜಪಾನಿನ ಆರ್ಥಿಕ ಬೆಳವಣಿಗೆಯ ದರ ಎಂದಿಗೂ 3% ದಾಟಿಲ್ಲ . ಹೆರುವೆಣಿಕೆಗೂ ಅರ್ಥ ವ್ಯವಸ್ಥೆಯ ಬೆಳವಣಿಗೆಗೂ ನೇರ ಸಂಬಂಧವಿದೆ .
ಯಾವುದೇ ಅರ್ಥ ವ್ಯವಸ್ಥೆಯಲ್ಲಿ ಹೆಚ್ಚೆಚ್ಚು ಯುವಕರು ದುಡಿಮೆ ಮಾಡುತ್ತಿದ್ದು , ಅವರು ಕಟುವ ತೆರಿಗೆ , ಅವರು ಮಾಡುವ ಉಳಿತಾಯ ಮುಂತಾದವು ಕೊಡುವ ಬಲದಿಂದಲೇ ಅಲ್ಲಿನ ಸರ್ಕಾರ ಮೂಲಭೂತ ಸೌಕರ್ಯ , ಶಿಕ್ಷಣ , ಆರೋಗ್ಯ ಸೇವೆಯಂತಹ ವ್ಯವಸ್ಥೆ ಕಲ್ಪಿಸುವುದು , ಹೆರುವೆಣಿಕೆ ಪ್ರಮಾಣ ಸಮತೋಲನಕ್ಕಿಂತ ಕೆಳಗೆ ಕುಸಿದ ಜಪಾನ್ ಈಗ ವಯಸ್ಸಾದವರೇ ಹೆಚ್ಚಿರುವ ಹಿರಿಯರ ಮನೆಯಂತಾಗಿದೆ . ಜಪಾನಿನ ಜನಸಂಖ್ಯೆಯ 39 % ಜನ ಈಗ 55 ವಯಸ್ಸು ದಾಟಿದವರು ಅನ್ನುವ ಅಂಕಿಅಂಶಗಳಿವೆ . ಇದನ್ನು ಗಮನಿಸಿದಾಗ ಒಂದು ನುಡಿ ಸಮಾಜದಲ್ಲಿ ಆರೋಗ್ಯಕರವಾದ ಜನಸಂಖ್ಯೆ ಬೆಳವಣಿಗೆಯ ದರ ಕಾಯ್ದುಕೊಳ್ಳುವುದು ಎಷ್ಟು ಮುಖ್ಯ ಅನ್ನುವುದು ಅರಿವಾಗುತ್ತೆ .
ಕನ್ನಡಿಗರ ಕತೆಯೇನು ?
ಜಪಾನಿನ ಕತೆ ಹೀಗಾದ್ರೆ ಕನ್ನಡಿಗರ ಕತೆಯೇನು ? ನಮ್ಮ ಹೆರುವೆಣಿಕೆ ಎಷ್ಟಿದೆ ? ನಾವು ಯಾವತ್ತೂ ಅಂದುಕೊಳ್ಳುವಂತೆ ಜನಸಂಖ್ಯೆ ಈಗಲೂ ನಮ್ಮ ಸಮಸ್ಯೆಯೇ ಅನ್ನುವ ಪ್ರಶ್ನೆಗಳಿಗೆ ಉತ್ತರ ಹುಡುಕಲು ಹೊರಟಾಗ ದಿಗಿಲಾಗುವ ಅಂಶಗಳು ಕಾಣಿಸುತ್ತವೆ . ಭಾರತವೂ ಇತರೆ ದೇಶಗಳಂತೆ ` ರಾಷ್ಟ್ರೀಯ ಜನಸಂಖ್ಯಾ ನೀತಿ ( ಎನ್ . ಪಿ . ಪಿ ) ' ಅನ್ವಯ 2020ರ ವೇಳೆಗೆ 2 . 1ರ ಹೆರುವೆಣಿಕೆ ಸಾಧಿಸುವ ಗುರಿ ಹೊಂದಿದೆ . ಭಾರತ ಹಾಗೊಂದು ಗುರಿ ಇಟ್ಟುಕೊಳ್ಳುವಾಗ ಕರ್ನಾಟಕದ , ತಮಿಳುನಾಡಿನ , ಮಹಾರಾಷ್ಟ್ರ , ಆಂಧ್ರದ ಹೀಗೆ ಭಾರತದ ಪ್ರತಿಯೊಂದು ಭಾಷಾ ಸಮುದಾಯದ ಹೆರುವೆಣಿಕೆ ಕೂಡಾ 2 . 1ರಲ್ಲಿರುವಂತೆ ನೋಡಿಕೊಳ್ಳುವುದು ಆಗಬೇಕಿತ್ತಲ್ಲವೇ ? ಆದರೆ ಯೋಜನಾ ಆಯೋಗ ಕರ್ನಾಟಕಕ್ಕೆ 12ನೇ ಪಂಚ ವಾರ್ಷಿಕ ಯೋಜನೆಯಲ್ಲಿ ಕೊಟ್ಟಿರುವ ಗುರಿ 1 . 8 ಆಗಿದೆ ! ಅದೇ ರೀತಿ ತಮಿಳುನಾಡು , ಆಂಧ್ರ , ಕೇರಳ , ಮಹಾರಾಷ್ಟ್ರಕ್ಕೆ ಕೊಟ್ಟಿರುವ ಗುರಿ ಕ್ರಮವಾಗಿ 1 . 6 , 15 , 1 . 7 ಮತ್ತು 1 . 8 ಆಗಿದೆ ಮತ್ತು ಇದೆಲ್ಲವೂ ಸಮತೋಲನದ ಮಟ್ಟಕ್ಕಿಂತ ಕಡಿಮೆಯಿವೆ ! ನಿಜಕ್ಕೂ ಜನಸಂಖ್ಯೆಯ ಸಮಸ್ಯೆ ಅನುಭವಿಸುತ್ತಿರುವ ಉತ್ತರದ ಕೆಲ ರಾಜ್ಯಗಳಾದ ಬಿಹಾರ್ , ಉತ್ತರಪ್ರದೇಶ ಮತ್ತು ಮಧ್ಯಪ್ರದೇಶಕ್ಕೆ ಕೊಟ್ಟಿರುವ ಗುರಿ ಕ್ರಮವಾಗಿ 3 . 2 , 2 . 8 ಮತ್ತು 3 . 0 ಆಗಿದೆ ಮತ್ತು ಅವೆಲ್ಲವೂ ಸಮತೋಲನ ಪ್ರಮಾಣಕ್ಕಿಂತ ಹೆಚ್ಚಿವೆ . ಅಂದರೆ ಭಾರತಕ್ಕೆ 2 . 1 ತಲುಪುವ ಆತುರದಲ್ಲಿ ಈಗಾಗಲೇ ಸಮತೋಲನ ಸಾಧಿಸಿರುವ ರಾಜ್ಯದ ಜನಸಂಖ್ಯೆ ಇನ್ನಷ್ಟು ಕಡಿಮೆಯಾಗಿಸುವ ಆಲೋಚನೆ ಯೋಜನಾ ಆಯೋಗದ ಗುರಿಯಲ್ಲಿ ಕಾಣಿಸುತ್ತೆ . 2011ರ ಹೊತ್ತಿಗೆ ಕರ್ನಾಟಕದ ಹೆರುವೆಣಿಕೆ 2 . 0 ಮಟ್ಟದಲ್ಲಿದ್ದು ಹೆಚ್ಚು ಕಡಿಮೆ ಸಮತೋಲನ ಸಾಧಿಸಿದೆ , ಆದರೆ ಇದನ್ನು ಇನ್ನು ಕಡಿಮೆಯಾಗಿಸುವ ಪ್ರಯತ್ನದಿಂದ ಇನ್ನೊಂದು ತಲೆಮಾರಿನ ಅವಧಿಯಲ್ಲಿ ಜಪಾನಿನಂತ ಕನ್ನಡಿಗರ ಸಂಖ್ಯೆಯೂ ತೀವ್ರ ಕುಸಿತಕ್ಕೆ ಈಡಾಗುವ ಅಪಾಯ ನಮ್ಮ ಮುಂದಿದೆ . ಜಪಾನಿನಲ್ಲಿ ಕೊನೆಯ ಪಕ್ಷ ಜಪಾನಿಯೇತರರ ವಲಸೆ ನಿಯಂತ್ರಿಸುವ ಬಗ್ಗೆ ನಿರ್ದಿಷ್ಟ ಕಾನೂನುಗಳಿವೆ . ಆದರೆ ಕರ್ನಾಟಕಕ್ಕೆ ಅಂತರ್ ರಾಜ್ಯ ವಲಸೆಯನ್ನು ನಿಯಂತ್ರಿಸುವ ಯಾವ ಆಯ್ಕೆಯೂ
ಇಲ್ಲದಿರುವುದರಿಂದ ಅತ್ಯಂತ ಸಹಜವಾಗಿ ಮುಂದಿನ ಒಂದೆರಡು ದಶಕಗಳಲ್ಲಿ ಜನರ ಕುಸಿಯುತ್ತಿರುವ ಕರ್ನಾಟಕಕ್ಕೆ ಮತ್ತು ಇತರೆ ದಕ್ಷಿಣದ ರಾಜ್ಯಗಳಿಗೆ ಹೆರುವೆಣಿಕೆ ಹೆಚ್ಚಿರುತೆ ಉತ್ತರದ ರಾಜ್ಯಗಳಿಂದ ದೊಡ್ಡ ಪ್ರಮಾಣದಲ್ಲಿ ಜನರು ವಲಸೆ ಬರುವ ಎಲ್ಲ ಲಕ್ಷಣಗಳು ಕಾಣುತ್ತಿವೆ . ಇದಕ್ಕೆ ಪುಷ್ಟಿ ನೀಡುವಂತೆ ಭಾರತದಲ್ಲಿರುವ 1ರಿಂದ 14ರ ವಯಸ್ಸಿನ ಪ್ರತಿ ಮೂರು ಮಕ್ಕಳಲ್ಲಿ ಒಂದು ಮಗು ಯುಪಿ / ಬಿಹಾರ್ ರಾಜ್ಯದಲ್ಲಿದೆ ಅನ್ನುವ ಅಂಕಿಅಂಶಗಳು 2011ರ ಜನಗಣತಿ ನೀಡುತ್ತಿದೆ . ಯಾವುದೇ ಅರ್ಥ ವ್ಯವಸ್ಥೆ ಬೆಳೆಯಲು ವಲಸೆ ತಕ್ಕ ಪ್ರಮಾಣದಲ್ಲಿ ಬೇಕು ಆದರೆ ಅನಿಯಂತ್ರಿತ ವಲಸೆ ಒಂದು ನಗರದ ಜನಲಕ್ಷಣದ ಮೇಲೆ , ಸ್ಥಳೀಯ ಸಂಸ್ಕೃತಿಯ ಮೇಲೆ ಮತ್ತು ಮೂಲಭೂತ ಸೌಲಭ್ಯಗಳ ಮೇಲೆ ಬೀರುವ ಪರಿಣಾಮಗಳನ್ನು ಕಣ್ಣಾರೆ ಕಾಣಲು ಬೆಂಗಳೂರಿನತ್ತ ಒಮ್ಮೆ ಕಣ್ಣು ಹಾಯಿಸಿದರೆ ಸಾಕು . ಹೀಗಿರುವಾಗ ಭಾರತದ ಜನಸಂಖ್ಯಾ ನೀತಿ ಇಲ್ಲಿನ ವೈವಿಧ್ಯತೆಗೆ ತಂದೊಡ್ಡುತ್ತಿರುವ ಸವಾಲುಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಿದೆ . ಜೊತೆಯಲ್ಲೇ ಕರ್ನಾಟಕದ ಸರ್ಕಾರವೂ ಕನ್ನಡಿಗರ , ತುಳುವರ , ಅಳಿವಿನಂಚಿಗೆ ಬಂದಿರುವ ಕೊಡವರ ಜನಸಂಖ್ಯೆಯ ಬೆಳವಣಿಗೆ ಆರೋಗ್ಯಕರವಾಗಿರುವಂತೆ ನೋಡಿಕೊಳ್ಳಲು ತಕ್ಕ ಕ್ರಮಕ್ಕೆ ಮುಂದಾಗಬೇಕು . ಇಲ್ಲದಿದ್ದಲ್ಲಿ ಕರ್ನಾಟಕದಲ್ಲಿ ಅದರ ಮೂಲನಿವಾಸಿಗಳು ಅಲ್ಪಸಂಖ್ಯಾತರಾಗುವ ಎಲ್ಲ ಅಪಾಯ ನಮ್ಮ ಮುಂದಿದೆ .

-ಇಂತಿ ನಿಮ್ಮ ಕನ್ನಡಿಗ ವಸಂತ್ ಶೆಟ್ಟಿ (ಬನವಾಸಿ ಬಳಗ)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹಿಂದಿ ನುಡಿಯ ದಾಸ್ಯ ಸ್ವೀಕರಿಸಿದ ರಾಜ್ಯ ಸರ್ಕಾರದಿಂದಲೇ ನಡೆಯುತ್ತಿದೆ ಕನ್ನಡದ ಕಡೆಗಣನೆ

CAB ಬಗ್ಗೆ ರಾಜಾರಾಂ ತಲ್ಲೂರು ಅವರ ಬರಹವನ್ನು ದಯವಿಟ್ಟು ಓದಿ, ಹಂಚಿಕೊಳ್ಳಿ | ಕನ್ನಡಿಗರಿಗೂ ಸಂಭಂದಿಸಿದೆ ಇದು|

Exploiting the South: How the Central Government Systematically Undermines South Indian States