ಕುಮಾರಸ್ವಾಮಿ ಸರಕಾರ ಅಧಿಕಾರಕ್ಕೆ ಬಂದಾಗ ರಾಷ್ಟ್ರೀಯ ಪಕ್ಷಗಳು ದೆಹಲಿ ಗುಲಾಮಗಿರಿಯಲ್ಲಿ ಮುಳುಗಿದ್ದು ಕನ್ನಡಿಗರ ಮೇಲೆ ಹಿಂದೀ ಹೇರಿಕೆಯನ್ನು ಮುಂದುವರೆಸುವುದು ತಪ್ಪುತ್ತದೆ ಎನ್ನುವ ನಿರೀಕ್ಷೆಯಿತ್ತು.. ಆದರೆ... - ಆನಂದ್ ಗುರು

ಕುಮಾರಸ್ವಾಮಿಯವರ ೨೦ ತಿಂಗಳ ಆಡಳಿತದ ಬಗ್ಗೆ ಒಳ್ಳೆಯ ಅಭಿಪ್ರಾಯ ಇತ್ತು. ೩೦–೪೦ ಶಾಸಕರನ್ನು ಗೆಲ್ಲಬಲ್ಲ ಪಕ್ಷಕ್ಕೆ ಇರುವ ರಾಜಕೀಯ ಇತಿಮಿತಿ, ಹೊಂದಾಣಿಕೆಯ ಅನಿವಾರ್ಯತೆಯ ಬಗ್ಗೆ ಸಹಾನುಭೂತಿ ಇತ್ತು. ಚುನಾವಣೆಯಲ್ಲಿ ಜನತಾದಳ ಗೆದ್ದು ಕರ್ನಾಟಕದ ರಾಜಕೀಯದಲ್ಲಿ ಮಹತ್ವದ ಪಾತ್ರ ವಹಿಸಬೇಕು. ಈ ಬಾರಿ ಅಧಿಕಾರ ಇಲ್ಲದಿದ್ದರೆ ಪ್ರಾದೇಶಿಕ ಪಕ್ಷ ನಾಶವಾಗುತ್ತದೆ ಎನ್ನುವ ಆತಂಕ ನಮಗಿತ್ತು. ಇದು ಯೋಗ್ಯ ಪ್ರಾದೇಶಿಕ ಪಕ್ಷ ಆಗಿದೆಯೋ ಇಲ್ಲವೋ ಅದು ಬೇರೆಯೇ ವಿಷಯ, ಈ ಬಾರಿ ಪ್ರಾದೇಶಿಕ ಪಕ್ಷ ಉಳಿಯದೆ ಇದ್ದರೆ ಮುಂದೆ ಮತ್ತೊಂದು ಸರಿಯಾದ ಪ್ರಾದೇಶಿಕ ಪಕ್ಷ ಹುಟ್ಟಲೂ ಸಾಧ್ಯವಾಗಲಾರದು ಎನ್ನುವ ಭಾವನೆಯಿತ್ತು. ಮಿಗಿಲಾಗಿ, ಕನ್ನಡ ಕನ್ನಡಿಗ ಕರ್ನಾಟಕ ಕೇಂದ್ರಿತವಾಗಿ ಜೆಡಿಎಸ್ ತನ್ನ ಸಿದ್ಧಾಂತಗಳನ್ನು ರೂಪಿಸಿಕೊಳ್ಳಲು ನಾವೂ ನೆರವಾಗಬಹುದು ಎಂದುಕೊಂಡೆವು.

ಈ ನಿಟ್ಟಿನಲ್ಲಿ ಜೆಡಿಎಸ್ ಪಕ್ಷದ ಹಲವು ನಾಯಕರನ್ನು ಭೇಟಿ ಮಾಡಿದ್ದೆವು. ಪಕ್ಷದ ಐಟಿ ಘಟಕದ ಗೆಳೆಯರ ಜೊತೆ ಒಕ್ಕೂಟ ವ್ಯವಸ್ಥೆ, ಹಿಂದೀ ಹೇರಿಕೆ, ಕನ್ನಡ ಕೇಂದ್ರಿತ ಸಿದ್ಧಾಂತಗಳ ಬಗ್ಗೆ ಮಾತಾಡಿದ್ದೆವು. ಶ್ರೀ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಪಕ್ಷದ ಪ್ರಣಾಳಿಕೆಯ ಕುರಿತು ಚರ್ಚೆ ಮಾಡಿ ಸಲಹೆ ನೀಡಿದ್ದೆವು. ಇದೆಲ್ಲದರ ಹಿಂದೆ ಇದ್ದ ಒಂದೇ ಒಂದು ಆಶಯ "ಕನ್ನಡನಾಡಿಗೆ ಕನ್ನಡ ಕೇಂದ್ರಿತ ಪ್ರಾದೇಶಿಕ ಪಕ್ಷ ಬೇಕು" ಎನ್ನುವುದಾಗಿತ್ತು.. ಯಾಕೆಂದರೆ ನಮ್ಮ ಮೆಟ್ರೋ ಹಿಂದೀ ಬೇಡ ಎನ್ನುವ ಚಳವಳಿಯನ್ನು ಜೆಡಿಎಸ್ ರಾಜಕೀಯವಾಗಿ ಚೆನ್ನಾಗಿ ಬಳಸಿಕೊಳ್ಳಬಹುದಾಗಿದ್ದರೂ ಅದರಲ್ಲಿ ಸಂಪೂರ್ಣ ವಿಫಲವಾಗಿತ್ತು. ಜೆಡಿಎಸ್ ಅಧಿಕಾರಕ್ಕೆ ಬಂದಾಗ, 'ಸಧ್ಯ.. ಕನ್ನಡನಾಡಿನ ಪ್ರಾದೇಶಿಕ ಪಕ್ಷ ಉಸಿರು ಉಳಿಸಿಕೊಳ್ಳಲು ಇದು ನೆರವಾಗುತ್ತದೆ' ಎಂದು ನಿಟ್ಟುಸಿರು ಬಿಟ್ಟೆವು. ರಾಷ್ಟ್ರೀಯ ಪಕ್ಷಗಳು ದೆಹಲಿ ಗುಲಾಮಗಿರಿಯಲ್ಲಿ ಮುಳುಗಿದ್ದು ಕನ್ನಡಿಗರ ಮೇಲೆ ಹಿಂದೀ ಹೇರಿಕೆಯನ್ನು ಮುಂದುವರೆಸುವುದು ತಪ್ಪುತ್ತದೆ ಎನ್ನುವ ನಿರೀಕ್ಷೆಯಿತ್ತು..

ದುರಾದೃಷ್ಟವಶಾತ್ ಇದೀಗ ಕುಮಾರಸ್ವಾಮಿಯವರು ಮತ್ತವರ ಸರ್ಕಾರ ಸಾವಿರ ಕನ್ನಡ ಶಾಲೆಗಳ ಕೊಲೆಗೆ ಮುಂದಾಗಿರುವ ಬೆಳವಣಿಗೆ ನಡೆದಿದೆ. ಈ ನಿರ್ಧಾರದ ನಂತರವೂ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದೆವು. ಆಗ ನಯವಾಗಿ ಅವರು, "ನಾನೂ ಕನ್ನಡಿಗ.. ಮಾಧ್ಯಮ ಕನ್ನಡವೇ ಇರುತ್ತದೆ, ಇಂಗ್ಲೀಶನ್ನು ಒಂದು ಭಾಷೆಯಾಗಿ ಕಲಿಸುವುದು ಮಾತ್ರಾ ನಮ್ಮ ಸರ್ಕಾರದ ಆದೇಶ" ಎಂದು ಸುಳ್ಳು ಹೇಳಿ ತಲೆಸವರಿ ಕಳಿಸಿದ್ದರು.. ಇದೀಗ ಹಟಕ್ಕೆ ಬಿದ್ದವರಂತೆ ಇಂಗ್ಲೀಷ್ ಮಾಧ್ಯಮ ಶಾಲೆ ಶುರು ಮಾಡುವುದು ಖಂಡಿತಾ ಎನ್ನುವ ನಿಲುವಿಗೆ ಬಂದಿದ್ದು, ಪ್ರಶ್ನಿಸಿದ ಜನರನ್ನು ವೈಯುಕ್ತಿಕವಾಗಿ ವಾಚಾಮಗೋಚರ ಅನ್ನಲು ಶುರುಮಾಡಿದರು. ತಮ್ಮ ನಿಲುವಿಗೆ ಒಂದು ವೈಜ್ಞಾನಿಕ ಅಧ್ಯಯನದ ಬೆಂಬಲ ಬೇಕು ಎನ್ನುವುದನ್ನು, ಈಗಾಗಲೇ ಒಂದು ಭಾಷೆಯಾಗಿ ಇಂಗ್ಲೀಷ್ ಕಲಿಸುವಲ್ಲೆ ಸರ್ಕಾರ ವಿಫಲವಾಗಿದೆ ಎನ್ನುವುದನ್ನು, ನೆರೆಯ ರಾಜ್ಯಗಳಲ್ಲಿ ಈ ಪ್ರಯೋಗ ಸೋತಿದೆ ಎನ್ನುವುದನ್ನೂ ಪರಿಗಣಿಸದೆ ತಮ್ಮ ನಿಲುವಿಗೆ ಅಂಟಿಕೊಳ್ಳುತ್ತಿದ್ದಾರೆ.

ಇದು ಕನ್ನಡ ರಾಜ್ಯ ಸರ್ಕಾರದ ನಿಲುವು ಆಗಬಾರದಿತ್ತು. ಕನ್ನಡದ ಶಿಕ್ಷಣ ವ್ಯವಸ್ಥೆಯು ಅಯೋಗ್ಯ ಎನ್ನುವುದನ್ನು ಒಪ್ಪುವ ಈ ನಡೆ.. ಜನರಲ್ಲಿ ಹೆಚ್ಚುತ್ತಿರುವ ಇಂಗ್ಲೀಷ್ ಮಾಧ್ಯಮದ ಹುಚ್ಚಿಗೆ ಪ್ರತ್ಯುತ್ತರವಾಗಿ ನಮ್ಮ ನಾಡಿನ ಶಿಕ್ಷಣ ವ್ಯವಸ್ಥೆಯನ್ನು ಸರಿಪಡಿಸುವ ನಿಲುವು, ದಿಟ್ಟತನ ತೊರಲಾರದೆ ಕನ್ನಡ ಮಾಧ್ಯಮಕ್ಕೆ ಇತಿಶ್ರೀ ಹಾಡುವ ಶರಣಾಗತಿಯ ನಿಲುವಾಗಿದೆ. ಈ ಹಿನ್ನೆಲೆಯಲ್ಲಿ, ಇದೇ ಮೊದಲಬಾರಿಗೆ ನಮ್ಮ ಜೆಡಿಎಸ್ ಪಕ್ಷವನ್ನು ಬೆಂಬಲಿಸುವ ನಿಲುವನ್ನು ಬದಲಿಸುವ ಪರಿಸ್ಥಿತಿ ಬಂದಿದೆ.. ಹಿಂದೀ ಹೇರಿಕೆಯ ರಾಷ್ಟ್ರೀಯ ಪಕ್ಷಗಳ ಹೊರಗಿನ ದಾಳಿಯನ್ನು ಎದುರಿಸುವುದು ಸುಲಭ. ಒಳಗಿನಿಂದ ಕನ್ನಡ ನಾಡನ್ನು, ಕನ್ನಡವನ್ನೂ ಗೆದ್ದಲಿನಂತೆ ನಾಶಮಾಡುವ, ಬುಡವನ್ನೇ ಕಡಿದು ಹಾಕುವ ಪ್ರಯತ್ನಕ್ಕೆ ಮುಂದಾಗುವ ಪ್ರಾದೇಶಿಕ ಪಕ್ಷಕ್ಕಿಂತ ಬೇರೆ ಯಾವುದೇ ಪಕ್ಷವಾದರೂ ವಾಸಿ ಎನ್ನುವ ನಿಲುವಿಗೆ ಬಂದು ತಲುಪುವಂತೆ ಆಗಿದೆ.

– ಆನಂದ್ ಗುರು ( ಬನವಾಸಿ ಬಳಗ )

#ಮಯೂರ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹಿಂದಿ ನುಡಿಯ ದಾಸ್ಯ ಸ್ವೀಕರಿಸಿದ ರಾಜ್ಯ ಸರ್ಕಾರದಿಂದಲೇ ನಡೆಯುತ್ತಿದೆ ಕನ್ನಡದ ಕಡೆಗಣನೆ

CAB ಬಗ್ಗೆ ರಾಜಾರಾಂ ತಲ್ಲೂರು ಅವರ ಬರಹವನ್ನು ದಯವಿಟ್ಟು ಓದಿ, ಹಂಚಿಕೊಳ್ಳಿ | ಕನ್ನಡಿಗರಿಗೂ ಸಂಭಂದಿಸಿದೆ ಇದು|

Exploiting the South: How the Central Government Systematically Undermines South Indian States