ಕಲಿಕೆಯೆಂದರೆ ಇಂಗ್ಲೀಶ್ ಮಾಧ್ಯಮದ ಕಲಿಕೆ ಎಂಬ ತಪ್ಪುನಂಬಿಕೆ
ಪ್ರತಿಯೊಬ್ಬ ತಂದೆ-ತಾಯಂದಿರೂ ತಮ್ಮ ಮಗುವಿಗೆ ಅತ್ಯತ್ತಮವಾದುದೇ ಸಿಗಲಿ ಎಂದು ಬಯಸುತ್ತಾರೆ. ಕಲಿಕೆಯ ವಿಷಯದಲ್ಲೂ ಹಾಗೆಯೇ, ತಮ್ಮ ಮಗುವಿಗೆ ಒಳ್ಳೆಯ ಗುಣಮಟ್ಟದ ಶಿಕ್ಷಣ ಸಿಕ್ಕಲಿ ಎಂಬ ಬಯಕೆ ಪ್ರತಿಯೊಬ್ಬ ತಂದೆ-ತಾಯಂದಿರದು. ಇಂಗ್ಲೀಶ್ ಮಾಧ್ಯಮದಲ್ಲಿ ಕಲಿಯುವುದೇ ಅತ್ಯುತ್ತಮವಾದುದು ಎಂಬ ನಂಬಿಕೆಯು ನಮ್ಮ ಕನ್ನಡ ಸಮಾಜದಲ್ಲಿ ಹರಡಿರುವುದರಿಂದಲೇ, ಹಲವಾರು ತಂದೆ-ತಾಯಂದಿರು ತಮ್ಮ ಮಕ್ಕಳನ್ನು ಇಂಗ್ಲೀಶ್ ಮಾಧ್ಯಮ ಶಾಲೆಗಳಿಗೆ ಕಳಿಸುತ್ತಿರುವುದು. “ಶುಲ್ಕ ಹೆಚ್ಚಿದ್ದರೂ ಪರವಾಗಿಲ್ಲ, ಮಗುವಿಗೆ ಒಳ್ಳೆಯ ಕಲಿಕೆ ಸಿಕ್ಕಲಿ” ಎಂಬ ಮನಸ್ಥಿತಿಯಿಂದಲೇ ಕೆಲವರು ತಮ್ಮ ಶಕ್ತಿಗೂ ಮೀರಿ ಶುಲ್ಕ ಕಟ್ಟಿ ತಮ್ಮ ಮಗುವನ್ನು ಶಾಲೆಗೆ ಕಳಿಸುತ್ತಿರುವುದು ಕಂಡುಬರುತ್ತದೆ.
ಗುಣಮಟ್ಟದ ಕಲಿಕೆಗೂ ಕಲಿಕೆ ಮಾಧ್ಯಮಕ್ಕೂ ಏನು ಸಂಬಂಧ?
“ಇಂಗ್ಲೀಶ್ ಮಾಧ್ಯಮದಲ್ಲಿ ಕಲಿತಾಕ್ಷಣ ಗುಣಮಟ್ಟದ ಕಲಿಕೆ ಸಿಕ್ಕಂತೆಯೇ?” ಎಂಬ ಪ್ರಶ್ನೆಯನ್ನರಿಸಿ ಹೊರಟಾಗ ಕಾಣುವುದು, ತಾಯ್ನುಡಿಯಲ್ಲಿ ಕಲಿಕೆಯೇ ಮಗುವಿಗೆ ಅತ್ಯುತ್ತಮ ಎಂಬುದು. ತಾಯ್ನುಡಿಯಲ್ಲಿ ಮೊದಲ ಹಂತದ ಕಲಿಕೆ ನಡೆಸುವುದು ಮಗುವಿಗೆ ಒಳಿತು ಎಂಬುದನ್ನು ಜಗತ್ತಿನ ಶಿಕ್ಷಣ ತಜ್ಞರೆಲ್ಲರೂ ಒಪ್ಪುತ್ತಾರೆ. ಯುನೆಸ್ಕೋ (UNESCO) ಸಂಸ್ಥೆ ಕೂಡಾ “ತಾಯ್ನುಡಿಯಲ್ಲಿ ಕಲಿಕೆಯೇ ಮೇಲು” ಎಂಬುದನ್ನು ಸಾರುತ್ತದೆ. ಜಗತ್ತಿನಲ್ಲಿ ಮುಂದುವರೆದ ನಾಡುಗಳು ಎಂದನಿಸಿಕೊಂಡಿರುವ ನಾಡುಗಳೆಲ್ಲದರಲ್ಲಿ ಶಿಕ್ಷಣವು ಮಗುವಿನ ನುಡಿಯಲ್ಲಿಯೇ ನಡೆಯುತ್ತದೆ.
ಎದ್ದು ಕಾಣುವಂತಹ ಸಾಧನೆ ಮಾಡಿರುವ ಹಲವಾರು ಮಹನೀಯರುಗಳು ತಮ್ಮ ಮೊದಲ ಹಂತದ ಕಲಿಕೆಯನ್ನು ಕನ್ನಡ ಮಾಧ್ಯಮದಲ್ಲಿಯೇ ನಡೆಸಿದ್ದರು. ಇನ್ಫ಼ೋಸಿಸ್ ಕಂಪನಿ ಕಟ್ಟಿ ಬೆಳೆಸಿದ ಎನ್. ಆರ್. ನಾರಾಯಣಮೂರ್ತಿಯವರು, ಕ್ಯಾಪ್ಟನ್ ಗೋಪಿನಾಥ್ ಅವರು, ಭಾರತರತ್ನ ಪ್ರೊ. ಸಿ. ಎನ್. ಆರ್. ರಾವ್ ಅವರು, ಹೆಸರಾಂತ ವಿಜ್ಞಾನಿ ಯು. ಆರ್. ರಾವ್ ಅವರು, ಇವರೆಲ್ಲರೂ ತಮ್ಮ ಮೊದಲ ಹಂತದ ಕಲಿಕೆಯನ್ನು ಕನ್ನಡ ಮಾಧ್ಯಮದಲ್ಲೇ ನಡೆಸಿದ್ದರು. ಕನ್ನಡ ಮಾಧ್ಯಮದಲ್ಲಿ ಕಲಿತರೆ ಮುಂದಿನ ದಿನಗಳಲ್ಲಿ ಕಷ್ಟ ಎಂಬುದಾಗಲೀ, ಕನ್ನಡ ಮಾಧ್ಯಮದಲ್ಲಿ ಕಲಿತರೆ ಇಂಗ್ಲೀಶ್ ಬರುವುದಿಲ್ಲ ಎಂಬುದಾಗಲೀ, ಎರಡೂ ಹುಸಿನಂಬಿಕೆಗಳು ಎಂಬುದನ್ನು ಈ ಮಹನೀಯರುಗಳ ಸಾಧನೆಗಳು ತೋರಿಸಿಕೊಡುತ್ತಿವೆ.
ಕಲಿಕೆಯೆಂದರೆ ಇಂಗ್ಲೀಶ್ ಮಾಧ್ಯಮದ ಕಲಿಕೆ ಎಂಬ ತಪ್ಪುನಂಬಿಕೆ
“ಕಲಿಕೆಯೆಂದರೆ ಇಂಗ್ಲೀಶ್ ಕಲಿಯುವುದು” ಎಂಬ ತಪ್ಪುನಂಬಿಕೆಯಿಂದ ಹಲವರು ತಮ್ಮ ಮಕ್ಕಳನ್ನು ಇಂಗ್ಲೀಶ್ ಮಾಧ್ಯಮ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಇಂಗ್ಲೀಶಿನ ಜ್ಞಾನ ಮಕ್ಕಳಿಗೆ ನಾಳಿನ ದಿನಗಳಲ್ಲಿ ತುಂಬಾ ಅವಕಾಶಗಳನ್ನು ಒದಗಿಸಬಲ್ಲದು ಎಂಬ ನಂಬಿಕೆಯಿಂದ ಇನ್ನೂ ಕೆಲವರು ತಮ್ಮ ಮಕ್ಕಳನ್ನು ಇಂಗ್ಲೀಶ್ ಮಾಧ್ಯಮ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ. ಈ ಎಲ್ಲಾ ಅನಿಸಿಕೆಗಳೂ ವೈಜ್ಞಾನಿಕವಾಗಿ ಒಪ್ಪಿತವಾದ ಸತ್ಯವನ್ನು ಕಡೆಗಣಿಸುತ್ತಿರುವುದಂತೂ ಹೌದು. ಈ ಅನಿಸಿಕೆಗಳು ಜನರ ಮನಸಿನಲ್ಲಿ ಮೂಡಲು ನಮ್ಮ ಸುತ್ತಲ ಪರಿಸರದಲ್ಲಿನ ಕೆಲ ಆಗು-ಹೋಗುಗಳೂ ಕಾರಣವಾಗಿವೆ.ಮಗುವು ಬೆಳೆದ ಮೇಲೆ, ಹೆಚ್ಚು ಅವಕಾಶಗಳು ಒದಗಿಬರುವಂತಾಗಬೇಕಾದರೆ ಬರೇ ಇಂಗ್ಲೀಶಿನ ಅರಿಮೆಯಷ್ಟೇ ಸಾಕಾಗುವುದಿಲ್ಲ. ಬದಲಿಗೆ, ವಿಜ್ಞಾನ, ಗಣಿತ ಸೇರಿದಂತೆ ಹಲವಾರು ವಿಚಾರಗಳ ಮೇಲೂ ಒಳ್ಳೆಯ ಹಿಡಿತವಿರಬೇಕಾಗುತ್ತದೆ. ಬೇರೆ ಬೇರೆ ವಿಚಾರಗಳ ಮೇಲೆ ಹಿಡಿತ ಸಾಧಿಸಲು ಕಲಿಕೆಯ ಅಡಿಪಾಯ ಗಟ್ಟಿಯಾಗಿರಬೇಕು.
ಕನ್ನಡ ಮಾಧ್ಯಮದಲ್ಲಿ ಓದಿಸಲು ಮುಂದಾಗಿರುವ ತಂದೆ-ತಾಯಂದಿರು
ಮಕ್ಕಳಿಗೆ ಗಟ್ಟಿ ಅಡಿಪಾಯದ ಕಲಿಕೆ ಸಿಗುವಂತಾಗುವುದು ತಾಯ್ನುಡಿಯಲ್ಲಿ ಕಲಿತಾಗಲೇ ಎಂಬುದನ್ನು ಅರಿತುಕೊಂಡಿರುವ ಹಲವು ತಂದೆ-ತಾಯಂದಿರೂ ನಮ್ಮ ನಡುವೆ ಇದ್ದಾರೆ. ಅಂತವರಲ್ಲಿ ಕೆಲವರು ತಮ್ಮ ಮಕ್ಕಳನ್ನು ಈಗಾಗಲೇ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದಿಸುತ್ತಿದ್ದಾರೆ. ತಾಯ್ನುಡಿಯಲ್ಲಿ ಕಲಿಕೆಯೇ ಮೇಲು ಎಂಬುದನ್ನು ಅರಿತಿದ್ದರೂ ಕೆಲವರು ತಮ್ಮ ಮಕ್ಕಳನ್ನು ಇಂಗ್ಲೀಶ್ ಮಾಧ್ಯಮಕ್ಕೆ ಸೇರಿಸುತ್ತಿರುವುದಕ್ಕೆ, ಒಳ್ಳೆಯ ಕನ್ನಡ ಮಾಧ್ಯಮ ಶಾಲೆಗಳ ಬಗ್ಗೆ ಗೊತ್ತಿಲ್ಲದಿರುವುದೇ ಕಾರಣವಿರಬಹುದು. ಇನ್ನೂ ಕೆಲವರು ತಮ್ಮ ಮಕ್ಕಳಿಗಾಗಿ ಒಳ್ಳೆಯ ಕನ್ನಡ ಮಾಧ್ಯಮ ಶಾಲೆಗಳ ಹುಡುಕಾಟದಲ್ಲಿರಬಹದು.
ಹೀಗೆ ಹುಡುಕಾಟದಲ್ಲಿರುವ ತಂದೆ-ತಾಯಂದಿರುಗಳಿಗೆ ಒಳ್ಳೆಯ ಕನ್ನಡ ಮಾಧ್ಯಮ ಶಾಲೆಗಳ ಬಗ್ಗೆ ಮಾಹಿತಿ ಒದಗಿಸುವ ಸೇತುವೆಯಾಗಿ ಈ ಮಿಂದಾಣವನ್ನು (website) ತಯಾರಿಸಲಾಗಿದೆ. ಹೆಚ್ಚಾಗಿ ಬೆಂಗಳೂರಿನ ಮತ್ತು ಕರ್ನಾಟಕದ ಇತರೆಡೆಗಳಲ್ಲಿರುವ ಒಳ್ಳೆಯ ಕನ್ನಡ ಮಾಧ್ಯಮ ಶಾಲೆಗಳ ಪಟ್ಟಿ ಮಾಡಿ, ಅವುಗಳ ಬಗ್ಗೆ ಸಾಕಷ್ಟು ವಿವರಗಳನ್ನೂ ಇಲ್ಲಿ ನೀಡಲಾಗಿದೆ. ಇಲ್ಲಿ ಕಾಣಸಿಗುವ ಪ್ರತಿಯೊಂದು ಶಾಲೆಗೂ ನಮ್ಮ ತಂಡವು ಖುದ್ದಾಗಿ ಭೇಟಿ ಕೊಟ್ಟಿದ್ದು, ಶಾಲೆಯ ಬಗೆಗಿನ ಎಲ್ಲಾ ವಿವರಗಳನ್ನು ಆಡಳಿತ ಮಂಡಳಿ ಅಥವಾ ಮುಖ್ಯಶಿಕ್ಷಕರಿಂದಲೇ ಒಟ್ಟುಮಾಡಲಾಗಿದೆ. ಒಳ್ಳೆಯ ಕನ್ನಡ ಮಾಧ್ಯಮ ಶಾಲೆಗಳ ಪಟ್ಟಿಯನ್ನೊಮ್ಮೆ ತಾವು ನೋಡಿರಿ.
ನಿಜಾ ಸರ್ ತಾಯ್ನುಡಿಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ನನಗೆ ತಿಳಿದಿರುವಹಾಗೆ ಸಮಾಜದಲ್ಲಿ ಹೇಗೆ ಬದುಕಬೇಕು ಎಂಬುವುದು ಅವರಿಗೆ ಅರಿವು ಮೂಡುವುದು ನಮ್ಮ ಸುತ್ತ ಮುತ್ತಲಿನ ಸಮಾಜದ ಜ್ಞಾನ ಹೆಚ್ಚುತ್ತದೆ ಹಾಗು ನಮ್ಮ ನಾಡು ನುಡಿ ನೆಲ ಜಲದ ಬಗೆಗಿನ ಅಭಿಮಾನ ಆ ಚಿಕ್ಕ ವಯಸ್ಸಿನಲ್ಲೇ ಮೂಡಿ ಬೆಳೆದು ನಿಂತಾಗ ಅವರಿಗೆ ಅದರ ಮಹತ್ವ ಅಭಿಮಾನ ಇನ್ನೂ ಹಚ್ಚುವುದು. ಧನ್ಯವಾದಗಳು
ಪ್ರತ್ಯುತ್ತರಅಳಿಸಿನಾನು ಇನ್ನು ಚಿಕ್ಕವನು ನನ್ನ ಅನಿಸಿಕೆಯ್ನು ನಾನು ಹಂಚಿಕೊಂಡದ್ದೆನೆ ತಪ್ಪಿದಲ್ಲಿ ಕ್ಷಮಿಸಿ