ಕಪ್ಪೆ, ಬಿಸಿನೀರಿನ ಪಾತ್ರೆ ಮತ್ತು ಕನ್ನಡಿಗರು! ಏನಿದು ಅಂತಿರಾ! ಮುಂದೆ ಓದಿ!

ಏನಿದು ಕಪ್ಪೆ ಮತ್ತು ಕನ್ನಡಿಗರ ಕಥೆ ಅನ್ಕೊತಿದೀರಾ ಹಾಗಾದ್ರೆ ಮುಂದೆ ಓದಿ......

ಕಪ್ಪೆ ಮತ್ತು ಬಿಸಿನೀರಿನ ಪಾತ್ರೆಯ ಕತೆ ನೀವು ಕೇಳಿರುತ್ತೀರಿ. ಬಿಸಿ ನೀರಿನ ಪಾತ್ರೆಗೆ ಕಪ್ಪೆಯನ್ನು ಹಾಕಿದರೆ ಅದು ಕೂಡಲೇ ಅಲ್ಲಿಂದ ಹೊರಕ್ಕೆ ಹಾರುತ್ತದೆ, ಆದರೆ ತಣ್ಣನೆಯ ನೀರಿನ ಪಾತ್ರೆಗೆ ಕಪ್ಪೆಯೊಂದನ್ನು ಹಾಕಿ, ಆ ಪಾತ್ರೆಯನ್ನು ಮೆಲ್ಲಗೆ ಬಿಸಿ ಮಾಡಲು ಶುರು ಮಾಡಿದರೆ ಕಪ್ಪೆ ಏನೂ ಮಾಡದೇ ಕೊನೆಯಲ್ಲಿ ನೀರು ಚೆನ್ನಾಗಿ ಬಿಸಿಯಾದಾಗಲೂ ಹೊರಕ್ಕೆ ಹಾರಲಾಗದೇ ಅದರಲ್ಲೇ ಪ್ರಾಣ ಬಿಡುತ್ತೆ. ಕನ್ನಡಿಗರ ಸ್ಥಿತಿಯೂ ಒಂದು ರೀತಿಯಲ್ಲಿ ಹೀಗೆಯೇ ಇದೆ ಇವತ್ತು. ಧರ್ಮ, ಜಾತಿಯ ಕಲಹದಲ್ಲಿ ಕಳೆದುಹೋಗಿರುವ ಕನ್ನಡಿಗರಿಗೆ ಪಾತ್ರೆ ಮೆಲ್ಲಗೆ ಬಿಸಿಯಾಗುತ್ತಿರುವುದರ ಬಗ್ಗೆ ಯಾವುದೇ ಅರಿವೂ ಇಲ್ಲ, ಚಿಂತೆಯೂ ಇಲ್ಲ ಅನ್ನುವಂತೆ ಇದ್ದಾರೆ.




ಇಂದು ಕರ್ನಾಟಕದ ಹಳ್ಳಿ ಹಳ್ಳಿಯಲ್ಲಿನ ಬ್ಯಾಂಕುಗಳಲ್ಲಿ ಕನ್ನಡಿಗರಿಗೆ ಉದ್ಯೋಗವೂ ಇಲ್ಲ, ಕನ್ನಡದಲ್ಲಿ ಸೇವೆಯೂ ಇಲ್ಲ ಅನ್ನುವ ಸ್ಥಿತಿ ಬಂದಿದೆ, ನೀಟ್ ತರದ ಪರೀಕ್ಷೆಯ ಮೂಲಕ ಸಣ್ಣಪುಟ್ಟ ಊರುಗಳ, ಹಳ್ಳಿಗಾಡಿನ, ಕನ್ನಡ ಮಾಧ್ಯಮದಲ್ಲಿ ಓದಿದ ಮಕ್ಕಳ ವೈದ್ಯರಾಗುವ ಕನಸಿಗೆ ಶಾಶ್ವತ ತಡೆಬಿದ್ದಿದೆ, ಜಿ.ಎಸ್.ಟಿ ತರದ ಕಾಯ್ದೆಯ ಮೂಲಕ ರಾಜ್ಯ ಸರ್ಕಾರಕ್ಕಿದ್ದ ತೆರಿಗೆ ವಿಧಿಸುವ ಹಕ್ಕುಗಳಲ್ಲಿ ಬಹುತೇಕ ಮೊಟಕಾಗಿದೆ, ಮಹದಾಯಿ ತರದ ವಿಚಾರದಲ್ಲಿ ಪುಟ್ಟ ರಾಜ್ಯ ಗೋವಾವನ್ನು ಒಲಿಸಿಯೋ, ಮಣಿಸಿಯೋ ಕುಡಿಯುವ ನೀರು ತರಲಾಗದ ಹೀನಾಯ ಸ್ಥಿತಿ ಬಂದೊದಗಿದೆ, ಇದೆಲ್ಲಕ್ಕೂ ಮಿಗಿಲಾಗಿ ಜನಸಂಖ್ಯೆಯ ಬೆಳವಣಿಗೆಯ ದರ ಸಮತೋಲನದ ಮಟ್ಟಕ್ಕಿಂತ ಕೆಳಗಿಳಿದು ಕನ್ನಡಿಗರ ಸಂಖ್ಯೆಯೇ ಇನ್ನು ಕೆಲ ದಶಕಗಳಲ್ಲಿ ಕುಸಿಯುವ ಭವಿಷ್ಯ ಕಾಣುತ್ತಿದೆ. ಇದೇ ಹೊತ್ತಲ್ಲಿ ಟಿ.ಎಫ್.ಆರ್ ಮೂರು, ನಾಲ್ಕರಲ್ಲಿರುವ ಬಿಮಾರು ರಾಜ್ಯಗಳಲ್ಲಿ ತಡೆಯಿರದೇ ಜನಸಂಖ್ಯೆ ಏರುತ್ತಿದ್ದು, ಇನ್ನೆರಡು ದಶಕದಲ್ಲಿ ಅದು ಪ್ರಗತಿಪರ ಕರ್ನಾಟಕದಂತಹ ರಾಜ್ಯಕ್ಕೆ ತಂದೊಡ್ಡುವ ವಲಸೆಯ ಬಿರುಗಾಳಿ ನಮ್ಮ ಮಕ್ಕಳ ಪಾಲಿಗೆ, ನಮ್ಮ ನುಡಿಯ ಪಾಲಿಗೆ, ನಮ್ಮ ಸಂಸ್ಕೃತಿಯ ಪಾಲಿಗೆ ತರಬಹುದಾದ ಅಪಾಯದ ಬಗ್ಗೆ ಯೋಚಿಸಿದಷ್ಟು ಆತಂಕವಾಗುತ್ತೆ.

ತಮ್ಮ ಉಳಿವಿನ ರಾಜಕೀಯ ಪ್ರಜ್ಞೆಯ ಬಗ್ಗೆ ಕವಿದಿರುವ ಈ ಮಸುಕು ಯಾವ ಮಟ್ಟಕ್ಕಿದೆ ಅಂದರೆ ರೈಲಿನ ಮೇಲೆ ರೈಲು ಬಿಟ್ಟು ಹೊರ ರಾಜ್ಯಗಳಿಗೆ ಜನರನ್ನು ವಲಸೆ ಮಾಡಿಸುವುದೇ ಏಳಿಗೆ ಎಂದು ನಂಬಿರುವ ಉತ್ತರಪ್ರದೇಶದಂತಹ ರಾಜ್ಯದ ನಾಯಕರನ್ನು ಇಲ್ಲಿ ಕರೆದು ತಲೆಮೇಲೆ ಹೊತ್ತು ಮೆರೆಸುತ್ತಿದ್ದೇವೆ. ಕನ್ನಡಿಗರ ಇಂದಿನ ಈ ಸಮಸ್ಯೆಗಳಿಗೆಲ್ಲ  ಪರಿಹಾರ ಕಲ್ಪಿಸಬೇಕಾದ ನಮ್ಮ ರಾಜಕಾರಣ ಯಾವ ದಿಕ್ಕಲ್ಲಿದೆ? ನಮ್ಮ ನಾಯಕರಿಗೆ ಇವು ಮುಖ್ಯ ವಿಷಯವಾಗದೇ ಧರ್ಮ, ಜಾತಿಯ ಹೆಸರಲ್ಲಿ ಭಾವನೆಗಳನ್ನು ಕೆರಳಿಸುತ್ತ ಕನ್ನಡಿಗರನ್ನು ತಮ್ಮ ನಿಜವಾದ ಸಮಸ್ಯೆಗಳಿಂದ ದೂರವಿರಿಸುತ್ತ ಬಂದಿದ್ದಾರೆ. ಪಾತ್ರೆಯಲ್ಲಿನ ನೀರು ಬಿಸಿಯಾಗುತ್ತ ಇದೆ, ಕನ್ನಡಿಗರು ಇನ್ನೂ ಹೊರಗಿನ ಸಿದ್ಧಾಂತಗಳನ್ನು ತಲೆಮೇಲೆ ಹೊತ್ತುಕೊಂಡು ಧರ್ಮ, ಜಾತಿಯ ಭಜನೆ ಮಾಡುತ್ತ ಕಳೆಯುತ್ತಿದ್ದರೆ ನೀರು ಕುದಿಯುವ ಹಂತ ತಲುಪಿದಾಗ ಏನಾಗುತ್ತೆ ಎಂದು ಹೇಳುವುದು ಬೇಡ.

- ವಸಂತ್ ಶೆಟ್ಟಿ (ಬನವಾಸಿ ಬಳಗ)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹಿಂದಿ ನುಡಿಯ ದಾಸ್ಯ ಸ್ವೀಕರಿಸಿದ ರಾಜ್ಯ ಸರ್ಕಾರದಿಂದಲೇ ನಡೆಯುತ್ತಿದೆ ಕನ್ನಡದ ಕಡೆಗಣನೆ

CAB ಬಗ್ಗೆ ರಾಜಾರಾಂ ತಲ್ಲೂರು ಅವರ ಬರಹವನ್ನು ದಯವಿಟ್ಟು ಓದಿ, ಹಂಚಿಕೊಳ್ಳಿ | ಕನ್ನಡಿಗರಿಗೂ ಸಂಭಂದಿಸಿದೆ ಇದು|

Exploiting the South: How the Central Government Systematically Undermines South Indian States