ತಮ್ಮ ಉದ್ಯೋಗವನ್ನು ಬೇರೆಯವರಿಗೆ ಬಿಟ್ಟುಕೊಟ್ಟು! ಬೀದಿಗೆ ಬರಲು ತಯಾರಾಗಿರುವ ಕನ್ನಡಿಗರು!

ಕನ್ನಡಿಗರ   ಕೈ ತಪ್ಪುತ್ತಿವೆ  ಬ್ಯಾಂಕ್  ಉದ್ಯೋಗಗಳು.......

ಅರವತ್ತು ಮತ್ತು ಎಪ್ಪತ್ತರ  ದಶಕಗಳಲ್ಲಿ, ಎಲ್ಲಿ  ನೋಡಿದರೂ ಬ್ಯಾಂಕ್‍ಗ¼ಲ್ಲಿ  ಕನ್ನಡಿಗರದೇ ಪಾರುಪತ್ಯ. ಒಂದೆರಡು ದಶಕಗಳ  ಕಾಲ ಇದು ಮುಂದುವರಿಯಿತು. ದಕ್ಷಿಣ ಭಾರತದ  ತುದಿಯಿಂದ  ಭಾರತದ  ಉದ್ದಗಲಕ್ಕೂ  ವಿವಿಧ ಬ್ಯಾಂಕ್‍ಗಳಲ್ಲಿ ಕನ್ನಡಿಗರು ಕಾಣಸಿಗುತ್ತಿದ್ದರು.  ಕರ್ನಾಟಕದಲ್ಲೇ ಹುಟ್ಟಿ ಬೆಳೆದ ಬ್ಯಾಂಕ್‍ಗಳು ದೇಶದ ಮೂಲೆ ಮೂಲೆಯಲ್ಲೂ ತಮ್ಮ ಶಾಖೆಗಳನ್ನು  ತೆರೆದು ವಿಸ್ತರಣೆಗೆ  ಮುಂದಾದಾಗ  ಸೇವಾ ಜೇಷ್ಠತೆಯ ಆಧಾರದ ಮೇಲೆ  ಹಲವೆಡೆ ಕನ್ನಡಿಗ ಸಿಬ್ಬಂದಿಗಳನ್ನೇ ವರ್ಗಾವಣೆ ಮಾಡಲಾಗಿತ್ತು.


ಬ್ಯಾಂಕ್ ರಾಷ್ಟ್ರೀಕರಣದ ಉದ್ದೇಶಗಳಲ್ಲಿ  ದೇಶದ  ಮೂಲೆ ಮೂಲೆಗೂ ಬ್ಯಾಂಕಿಂಗ್  ಸೌಲಭ್ಯ ವಿಸ್ತರಿಸುವುದು ಪ್ರಮುಖವಾಗಿತ್ತು. ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್‍ಗಳು  ತಮ್ಮ ಪ್ರಾದೇಶಿಕ  ವ್ಯಾಪ್ತಿಯನ್ನು ಮೀರಿ ಶಾಖಾ  ವಿಸ್ತರಣೆಗೆ  ಮುಂದಾದವು. ಸೀಮಿತ ವರ್ಗದವರಿಗೆ  ಸಿಗುತ್ತಿದ್ದ ಬ್ಯಾಂಕ್ ಸೌಲಭ್ಯವನ್ನು  ಬಳಸಲು ಜನಸಾಮಾನ್ಯರೂ ಮುಂದಾದಾಗ  ಸ್ಥಳೀಯರ  ಭಾಷೆಯಲ್ಲಿ  ವ್ಯವಹರಿಸುವುದು ಬ್ಯಾಂಕ್‍ಗಳಿಗೆ  ಅನಿವಾರ್ಯವಾಯಿತು. ಹೀಗಾಗಿ ರಾಜ್ಯವಾರು ನೇಮಕಾತಿ ಪ್ರಕ್ರಿಯೆಗೆ  ಚಾಲನೆ ಸಿಕ್ಕು , ಪ್ರಾರಂಭಿಕ  ಹಂತದ  ಹುದ್ದೆಗಳಿಗೆ   ಆ ರಾಜ್ಯದವರನ್ನೇ ನೇಮಿಸಿಕೊಳ್ಳುವುದಕ್ಕೆ  ಆದ್ಯತೆ ನೀಡಲಾಯಿತು.  ಬ್ಯಾಂಕ್‍ಗಳು ಬಳಸುವ ಕಾಗದ ಪತ್ರಗಳು, ದಾಖಲೆಗಳು, ದಸ್ತಾವೇಜುಗಳು ಇಂಗ್ಲೀಷ್ ಮತ್ತು ಹಿಂದಿಯಲ್ಲೇ ಇದ್ದರೂ, ಸಿಬ್ಬಂದಿಗಳು ಸ್ಥಳೀಯ ಭಾಷೆಯಲ್ಲಿ ವ್ಯವಹರಿಸಬಲ್ಲವರಾಗಿದ್ದರು.   
   ಕೃಷಿ  ಕ್ಷೇತ್ರಕ್ಕೆ  ಹಣಕಾಸಿನ  ನೆರವು ನೀಡುವ ಉದ್ದೇಶಕ್ಕಾಗಿ ಗ್ರಾಮೀಣ ಭಾಗದಲ್ಲಿ  ರಾಷ್ಟ್ರೀಕೃತ  ಬ್ಯಾಂಕ್‍ಗಳು ತಮ್ಮ ಶಾಖೆಗಳನ್ನು  ತೆರೆಯುವುದು ಅಗತ್ಯವಾದಂತೆ,  ಅವೇ ರಾಜ್ಯಗಳ ಅಭ್ಯರ್ಥಿಗಳನ್ನೂ ನೇಮಿಸಿಕೊಳ್ಳುವುದು ಅನಿವಾರ್ಯವಾಗಿತ್ತು.
   ಮೊದ ಮೊದಲು ಪ್ರತಿಯೊಂದು ಬ್ಯಾಂಕ್ ತನ್ನದೇ ಆದ ನೇಮಕಾತಿ ವ್ಯವಸ್ಥೆ ಹೊಂದಿತ್ತು. ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ಅರ್ಜಿಗಳನ್ನು  ಆವ್ಹಾನಿಸಿ,  ಸಂದರ್ಶನ ನಡೆಸಿ, ಸಿಬ್ಬಂದಿಗಳನ್ನು ಆಯ್ಕೆ ಮಾಡಲಾಗುತ್ತಿತ್ತು. ಇಂತಹ ನೇಮಕಾತಿಗಳು ಪ್ರದೇಶವಾರು,  ರಾಜ್ಯವಾರು ನಡೆಯುತ್ತಿದ್ದವು.  ನಂತರದ  ದಿನಗಳಲ್ಲಿ   ಲಿಖಿತ  ಪರೀಕ್ಷೆಗಳನ್ನು ಪ್ರಾರಂಭಿಸಿ, ಅದರಲ್ಲಿ ತೇರ್ಗಡೆ ಹೊಂದಿದವರನ್ನು  ಸಂದರ್ಶನಕ್ಕೆ  ಆವ್ಹಾನಿಸಲಾಗುತ್ತಿತ್ತು.  ಈ ಪದ್ದತಿಯ ಸುಧಾರಿತ ರೂಪವಾಗಿ ಪ್ರತಿಯೊಂದು ಬ್ಯಾಂಕ್  ಪ್ರತ್ಯೇಕವಾಗಿ  ನೇಮಕಾತಿ ನಡೆಸುವ  ಬದಲಿಗೆ ಕೇಂದ್ರೀಕೃತ ವ್ಯವಸ್ಥೆಯ   ನೆರವಿನ ಮೂಲಕ  ಸಿಬ್ಬಂದಿಗಳನ್ನು  ನೇಮಕ ಮಾಡುವ  ವಿಧಾನದ ಅಳವಡಿಕೆಯಾಯಿತು.
   ರಾಷ್ಟ್ರೀಕರಣಕ್ಕೂ ಪೂರ್ವದಲ್ಲಿ ಬ್ಯಾಂಕ್ ಸಿಬ್ಬಂದಿಗಳ ನೇಮಕಾತಿಯನ್ನು ಆಡಳಿತ ಮಂಡಳಿಗಳ ಇಚ್ಛೆಯಂತೆ  ನಡೆಸಲಾಗುತ್ತಿತ್ತು.  ಜಾತಿ, ಪ್ರದೇಶ,  ಭಾಷೆ  ಮುಂತಾದ ಅಂಶಗಳೂ ಬ್ಯಾಂಕ್ ಸಿಬ್ಬಂದಿ ನೇಮಕಾತಿಯಲ್ಲಿ ಪ್ರಭಾವ ಬೀರುತ್ತಿದ್ದವು. ಯಾವಾಗ ಲಿಖಿತ  ಪರೀಕ್ಷೆಗಳ  ಯುಗ ಪ್ರಾರಂಭವಾಯಿತೋ, ಅಲ್ಲಿಂದ ಮುಂದೆ ಸಿಬ್ಬಂದಿಯ  ಆಯ್ಕೆಯನ್ನು  ಪ್ರಭಾವಿಸುವ   ಇತರೆ ಅಂಶಗಳು  ಹಿನ್ನೆಲೆಗೆ  ಸರಿಯತೊಡಗಿದವು.
    ಕೇಂದ್ರಿಕೃತ ನೇಮಕಾತಿ ವ್ಯವಸ್ಥೆಯಲ್ಲಿ  ಮೊದಲು ರಾಜ್ಯವಾರು, ಪ್ರದೇಶವಾರು ಆಯ್ಕೆ ನಡೆಯುತ್ತಿತ್ತು.  ಇದರಿಂದಾಗಿ ಪ್ರತಿ ರಾಜ್ಯದವರಿಗೂ  ಪ್ರಾತಿನಿಧ್ಯ ದೊರಕುತ್ತಿತ್ತು ಹಾಗೂ ಆಯಾ ಭಾಷಿಕರಿಗೆ  ಅವರ ಪ್ರದೇಶದಲ್ಲೇ ಉದ್ಯೋಗ ಸಿಗುತ್ತಿತ್ತು.  ಇದೇ  ವ್ಯವಸ್ಥೆಯ ಮುಂದುವರಿದ ಭಾಗವಾಗಿ, ದೇಶ ಮಟ್ಟದ ಪ್ರವೇಶಾತಿ ಪರೀಕ್ಷೆ ನಡೆಸುವ , ಆಯ್ಕೆಯಾದವರನ್ನು  ವಿವಿಧ ಬ್ಯಾಂಕ್‍ಗಳ ಬೇಡಿಕೆಗನುಗುಣವಾಗಿ  ಒದಗಿಸುವ  ಹೊಣೆಗಾರಿಕೆ  ಐಬಿಪಿಎಸ್ ಸಂಸ್ಥೆಗೆ  ನೀಡಲಾಯಿತು.
  ಐಬಿಪಿಎಸ್ ( Institute of Banking Personnel Selection- ಬ್ಯಾಂಕ್  ಉದ್ಯೋಗಿಗಳ ಆಯ್ಕೆ ಸಂಸ್ಥೆ) ರಿಝರ್ವ್ ಬ್ಯಾಂಕ್‍ನಡಿ  ಕಾರ್ಯನಿರ್ವಹಿಸುವ ಸ್ವಾಯತ್ತ ಸಂಸ್ಥೆ. ಕೇಂದ್ರ ಸರ್ಕಾರದ ಆದೇಶದ ಮೇರೆಗೆ ನೇಮಕಗೊಂಡ ಆಡಳಿತ ಮಂಡಳಿ ಈ ಸಂಸ್ಥೆಯನ್ನು ಮುನ್ನಡೆಸುತ್ತದೆ.  ಮುಂಬೈಯಲ್ಲಿ ಪ್ರಧಾನ ಕಛೇರಿ ಹೊಂದಿರುವ  ಐಬಿಪಿಎಸ್ ಎಂಬತ್ತರ ದಶಕದಿಂದ  ಅಸ್ತಿತ್ವದಲ್ಲಿದ್ದರೂ ಕಳೆದ ನಾಲ್ಕಾರು ವರ್ಷಗಳಿಂದ   ಪ್ರಚಾರಕ್ಕೆ ಬಂದಿದೆ.
 
ಬ್ಯಾಂಕ್‍ಗಳ ಗುಮಾಸ್ತರು , ಕಿರಿಯ ಮತ್ತು ಹಿರಿಯ  ಅಧಿಕಾರಿಗಳು,  ವಿಷಯ ಪರಿಣಿತರು ಸೇರಿದಂತೆ ವಿವಿಧ ಹುದ್ದೆಗಳಿಗೆ  ಪ್ರವೇಶ ಪರೀಕ್ಷೆಗಳನ್ನೂ ಐಬಿಪಿಎಸ್  ನಡೆಸುತ್ತದೆ.  ಈ ಪರೀಕ್ಷೆಗಳನ್ನು ಇಂಗ್ಲೀಷ್ ಅಥವಾ ಹಿಂದಿಯಲ್ಲೇ ಬರೆಯಬೇಕಾಗುತ್ತದೆ. ಪ್ರತಿ ವರ್ಷವೂ ಲಕ್ಷಾಂತರ ಯುವಕ, ಯುವತಿಯರು ಈ ಪರೀಕ್ಷೆಗಳಿಗೆ  ಹಾಜರಾಗುತ್ತಾರೆ. ದೇಶಮಟ್ಟದಲ್ಲಿ  ನಡೆಯುವ  ಪರೀಕ್ಷೆಯಲ್ಲಿ  ಆಯ್ಕೆಯಾದವರನ್ನು  ವಿವಿಧ ಬ್ಯಾಂಕ್‍ಗಳು ತಮ್ಮ ಶಾಖೆ   ಮತ್ತು  ಕಛೇರಿಗಳಿಗೆ  ನಿಯೋಜಿಸುತ್ತಾರೆ.  ಇದರಿಂದಾಗಿ ಭಾಷಾವಾರು ಕಲಸು ಮೇಲೋಗರವಾಗಿ, ಯಾವುದೋ ಭಾಷಿಕರು ಯಾವುದೋ ಪ್ರದೇಶದಲ್ಲಿ  ಕಾರ್ಯನಿರ್ವಹಿಸುವ  ಪರಿಸ್ಥಿತಿ ಉಂಟಾಗಿದೆ.

ಇದಕ್ಕೂ ಪೂರ್ವದಲ್ಲಿ  ಕೂಡಾ ಬ್ಯಾಂಕ್ ನೇಮಕಾತಿ ಪರೀಕ್ಷೆಗಳು ಇಂಗ್ಲೀಷ್‍ನಲ್ಲೇ ಇರುತ್ತಿದ್ದವು. ಆದರೆ ಪ್ರಾದೇಶಿಕ ಅಗತ್ಯತೆಗಳಿಗನುಗುಣವಾಗಿ ನೇಮಕಾತಿ ನಡೆಯುತ್ತಿದ್ದುದರಿಂದ   ಸಾಮಾನ್ಯವಾಗಿ  ಆ ಪ್ರದೇಶದವರು ಅಥವಾ ಆ  ಭಾಷಿಕರೇ ಆಯ್ಕೆಯಾಗುತ್ತಿದ್ದರು.  ಒಂದೊಮ್ಮೆ  ಪರಭಾಷಿಕರು ಆಯ್ಕೆಯಾದರೂ ಅಂಥವರನ್ನು ಗ್ರಾಹಕರೊಂದಿಗೆ ನೇರ ಸಂಪರ್ಕಕ್ಕೆ ಬರುವ ಶಾಖಾ  ಹುದ್ದೆಗಳ  ಬದಲು ಆಡಳಿತ  ಕಛೇರಿಗಳಲ್ಲಿ  ನಿಯೋಜಿಸುವ  ಪದ್ಧತಿ ಇತ್ತು.  ಆದರೆ ಈಗ ಪ್ರದೇಶವಾರು  ನೇಮಕಾತಿಯನ್ನು  ಕೈ ಬಿಟ್ಟಿರುವುದರಿಂದ ಹಾಗೂ ಬ್ಯಾಂಕ್‍ಗಳ  ಉಡಾಫೆಯ ಧೋರಣೆಯಿಂದಾಗಿ ಬ್ಯಾಂಕ್  ಶಾಖೆಗಳಲ್ಲಿ  ಪರಭಾಷಿಕ ಉದ್ಯೋಗಿಗಳೊಂದಿಗೆ  ವ್ಯವಹರಿಸಬೇಕಾದ   ಪರಿಸ್ಥಿತಿ ಇಡೀ ದೇಶದ  ತುಂಬಾ ಉದ್ಭವವಾಗಿದೆ.
 
ಒಂದೆಡೆ  ಸರ್ಕಾರ  ಎಲ್ಲರಿಗೂ ಬ್ಯಾಂಕ್ ಸೌಲಭ್ಯ ಸಿಗಬೇಕೆನ್ನುತ್ತದೆ. ಅದಕ್ಕಾಗಿ  ಶೂನ್ಯ  ಬ್ಯಾಲೆನ್ಸ್ ಖಾತೆಗಳನ್ನು  ತೆರೆಯಲು ಪ್ರೋತ್ಸಾಹ  ನೀಡಲಾಗುತ್ತಿದೆ. ಎಲ್ಲಾ ಸೌಲಭ್ಯಗಳಿಗೂ ಬ್ಯಾಂಕ್ ಖಾತೆ ಬೇಕೇ ಬೇಕು.  ಜನಸಾಮಾನ್ಯರು ಬ್ಯಾಂಕಿಗೆ ಹೋದರೆ,  ಕನ್ನಡದಲ್ಲಿ  ಮಾತನಾಡುವ  ಸಿಬ್ಬಂದಿ ಕಾಣುವುದೇ ಇಲ್ಲ.  ಇತರ  ಪ್ರದೇಶಗಳಲ್ಲೂ ಜನಸಾಮಾನ್ಯರು ಕಷ್ಟ  ಅನುಭವಿಸುತ್ತಿದ್ದಾರೆ.  ಇದರ  ನೇರ ಪರಿಣಾಮವೆಂದರೆ ಮಧ್ಯವರ್ತಿಗಳ   ಹುಟ್ಟು. ಅರ್ಧಂಬರ್ಧ ಹಿಂದಿ ಅಥವಾ ಇಂಗ್ಲೀಷ್ ಬಲ್ಲವರು  ಏಜೆಂಟರಂತೆ  ಕಾರ್ಯ ನಿರ್ವಹಿಸುತ್ತಾ ಬ್ಯಾಂಕ್ ಖಾತೆದಾರರಿಂದ  ಕಮಿಷನ್ ಪಡೆಯುತ್ತಿದ್ದಾರೆ.
 
ಕಳೆದ ಒಂದು ದಶಕಕ್ಕಿಂತ ಮೊದಲು ಬ್ಯಾಂಕ್  ಸಿಬ್ಬಂದಿ  ಹಾಗೂ  ಗ್ರಾಹಕರ ನಡುವೆ  ಆತ್ಮೀಯ ಸಂಬಂಧ ಇರುತ್ತಿತ್ತು. ಹಣ ಭರಣ ಮಾಡುವ ಚಲನ್,  ಹಣ ತೆಗೆಯುವ,  ಚೆಕ್ ಅಥವಾ ವಿತ್‍ಡ್ರಾವಲ್  ಸ್ಲಿಪ್  ಭರ್ತಿ ಮಾಡಲು ಸಿಬ್ಬಂದಿ ಸಹಕರಿಸುತ್ತಿದ್ದರು. ಈ  ಆತ್ಮೀಯ ಸಂಬಂಧ ಇಂದು ಅಪರೂಪವಾಗುತ್ತಿದೆ. ಭಾಷೆ ಬರದ, ಮುಖ ಗಂಟಿಕ್ಕಿ ಕುಳಿತಿರುವ , ತಮ್ಮ  ನಡುವೆಯೇ ಮಾತುಕತೆಯಲ್ಲಿ ಮಗ್ನರಾಗಿರುವ , ಮೊಬೈಲ್‍ನಲ್ಲಿ  ತಲ್ಲೀನರಾಗಿರುವ  ಸಿಬ್ಬಂದಿಗಳೊಂದಿಗೆ  ವ್ಯವಹರಿಸುವುದು  ಜನಸಾಮಾನ್ಯರಿಗೆ  ಮುಜುಗರದ ಸಂಗತಿಯಾಗಿದೆ.  ಸಣ್ಣ , ಪುಟ್ಟ ಅರ್ಜಿಗಳನ್ನು  ಬರೆದುಕೊಟ್ಟು ಹಣ ಪಡೆಯುವವರು ಸರ್ಕಾರಿ ಕಛೇರಿಗಳ  ಎದುರು  ಕುಳಿತಿರುವಂತೆಯೇ ಇನ್ನು ಮುಂದೆ ಬ್ಯಾಂಕ್‍ಗಳಿಂದ ತಮ್ಮ ಖಾತೆಯಿಂದ  ಹಣ ಪಡೆಯಲೂ ಏಜೆಂಟರನ್ನು  ಅವಲಂಬಿಸಬೇಕಾದ   ಪರಿಸ್ಥಿತಿ  ಉದ್ಭವವಾದರೂ ಆಶ್ಚರ್ಯಪಡಬೇಕಿಲ್ಲ.
 
ಬ್ಯಾಂಕ್‍ಗಳಲ್ಲಿ  ಉದ್ಯೋಗ ಪಡೆಯಲು  ವಾಣಿಜ್ಯ  ಪದವಿ ಅಗತ್ಯವೆಂದು  ನಂಬಿದ್ದ ಕಾಲವೊಂದಿತ್ತು.  ಗುಣಮಟ್ಟದ  ಸಿಬ್ಬಂದಿಗಳ  ಆಯ್ಕೆಯ  ಹೆಸರಿನಲ್ಲಿ  ಇಂದು ನಡೆಯುತ್ತಿರುವ  ಸ್ಪರ್ಧಾತ್ಮಕ ಪರೀಕ್ಷೆಗಳನ್ನು  ಎದುರಿಸಿ ಗುಮಾಸ್ತರಾಗಿ  ಆಯ್ಕೆಯಾಗುತ್ತಿರುವವರಲ್ಲಿ ಇಂಜನಿಯರ್‍ಗಳು, ವಿಜ್ಞಾನ ಪದವೀಧರರು, ಸ್ನಾತಕೋತ್ತರ ಪದವೀಧರರೂ ಸೇರಿದ್ದಾರೆ.  ಕಲಿತಿರುವ  ವಿಷಯಕ್ಕೂ , ಮಾಡುವ  ಉದ್ಯೋಗಕ್ಕೂ ಪರಸ್ಪರ  ಸಂಬಂಧವೇ  ಇಲ್ಲವಾಗಿದೆ.  ಬ್ಯಾಂಕ್  ಶಾಖೆಗಳಲ್ಲಿ ಕಾರ್ಯನಿರ್ವಹಿಸಲು ಅಗತ್ಯವಾದ  ಸಂವೇದನಾಶೀಲತೆ,  ಗ್ರಾಹಕರ  ಕುರಿತಾದ  ಗೌರವ,  ಸಹಾಯ ನೀಡುವ  ಮನೋಭಾವಗಳು ಮಾಯವಾಗುತ್ತಿವೆ.
   
ಈ ಪರಿಸ್ಥಿತಿ ನಿರ್ಮಾಣ ಮಾಡುವುದರ  ಹಿಂದೆ ಬಹುದೊಡ್ಡ ಷಡ್ಯಂತ್ರವಿದೆ.  ಏಕರೂಪತೆ , ರಾಷ್ಟ್ರೀಯತೆಯ ಹೆಸರಿನಲ್ಲಿ  ಪ್ರಾದೇಶಿಕ ವೈವಿದ್ಯತೆಯನ್ನು ತುಳಿದು, ಯುವಕರಲ್ಲಿ ಕೀಳರಿಮೆ, ಹೀನತಾಭಾವವನ್ನು ಹುಟ್ಟು ಹಾಕುವ  ಹುನ್ನಾರವಿದೆ.  ಇದಕ್ಕೆ  ಪೂರಕವಾಗಿ ಹಿಂದಿ ಭಾಷಾ  ಹೇರಿಕೆಯ  ದುರುದ್ದೇಶವೂ ಜೊತೆಗೂಡಿದೆ.  ಇಂಗ್ಲೀಷ್ ಭಾಷೆಯನ್ನು ಬಳಸಿ ಭಾರತೀಯರಲ್ಲಿ  ಕೀಳರಿಮೆ ಮೂಡಿಸಿ, ಅವರನ್ನು  ಶೋಷಿಸಿ, ಭಾರತದ ಸಂಪತ್ತನ್ನು  ಕೊಳ್ಳೆ ಹೊಡೆದ ಬ್ರಿಟಿಷರ  ಮನೋಭಾವ ವೇ  ಇಂದು ಕೂಡಾ  ಕಾರ್ಯವೆಸಗುತ್ತ್ತಿದೆ.  ಅಂದಿನ  ಬ್ರಿಟಿಷರ ಸ್ಥಾನವನ್ನು  ಬಂಡವಾಳಶಾಹಿಗಳು ಆಕ್ರಮಿಸಿದ್ದಾರೆ ಎನ್ನುವುದಷ್ಟೇ ವ್ಯತ್ಯಾಸ.  ಇಂತಹ  ಶೋಷಣಾಕಾರಿ  ವ್ಯವಸ್ಥೆಯನ್ನು  ಕೇಂದ್ರ ಸರ್ಕಾರಗಳು  (ಪಕ್ಷಭೇದವಿಲ್ಲದೇ) ಮುಂದುವರಿಸಿಕೊಂಡು  ಬರುತ್ತಿವೆ.
 
ಗ್ರಾಮೀಣ  ಬ್ಯಾಂಕ್‍ಗಳು  ಅನುಸರಿಸುತ್ತಿರುವ ನೇಮಕಾತಿ ನೀತಿ, ಮೇಲಿನ ಹೇಳಿಕೆಗೆ ಪ್ರಬಲ ಸಾಕ್ಷಿ. ರಾಷ್ಟ್ರೀಕೃತ  ಬ್ಯಾಂಕ್‍ಗಳು ತಲುಪಲಾರದ  ಕುಗ್ರಾಮಗಳಲ್ಲಿ ಕಾರ್ಯನಿರ್ವಹಿಸುವ  ಉದ್ದೇಶದಿಂದ  ಪ್ರಾರಂಭಗೊಂಡ ಗ್ರಾಮೀಣ ಬ್ಯಾಂಕ್‍ಗಳು  ವಿಲೀನೀಕರಣ ಪ್ರಕ್ರಿಯೆಗೊಳಗಾಗಿ ಪ್ರಾದೇಶಿಕ ಸೊಗಡನ್ನು ಕಳೆದುಕೊಂಡವು.  ಇವು ಕೂಡಾ ಐಬಿಪಿಎಸ್ ಮೂಲಕವೇ  ಸಿಬ್ಬಂದಿಗಳನ್ನು  ನೇಮಕ  ಮಾಡಿಕೊಳ್ಳುತ್ತವೆ.  ಅಂದರೆ ಮುಂದಿನ  ದಿನಗಳಲ್ಲಿ  ಹಳ್ಳಿಯ  ಮೂಲೆಗಳಲ್ಲಿರುವ  ಗ್ರಾಮೀಣ  ಬ್ಯಾಂಕ್‍ಗಳಲ್ಲಿಯೂ  ಪರಭಾಷಿಕರೊಂದಿಗೆ  ವ್ಯವಹರಿಸಬೇಕಾದ  ದುಸ್ಥಿತಿಯನ್ನು  ಕನ್ನಡಿಗರು ಎದುರಿಸಲಿದ್ದಾರೆ.

ಬ್ಯಾಂಕ್  ಗುಮಾಸ್ತಗಿರಿ,  ಆಫೀಸರ್‍ಗಿರಿ ಎಂದರೆ ಅಷ್ಟೊಂದು ಕಠಿಣವೇ? ಖಂಡಿತಕ್ಕೂ ಅಲ್ಲ.  ಎಸ್.ಎಸ್. ಎಲ್.ಸಿ  ಪಾಸಾದವರು ಗುಮಾಸ್ತರಾಗಿ ನೇಮಕಗೊಂಡು, ಪದೋನ್ನತಿ ಹೊಂದಿ ಅಧಿಕಾರಿ, ಮ್ಯಾನೇಜರ್ ಮುಂತಾದ ಉನ್ನತ ಹುದ್ದೆಗಳನ್ನು  ಯಶಸ್ವಿಯಾಗಿ ನಿಭಾಯಿಸಿದ  ಹಲವು ನಿದರ್ಶನಗಳಿವೆ.  ಅಷ್ಟಕ್ಕೂ ಈ ಹುದ್ದೆಗಳಿಗೆ  ಇಂದು ಬೇಕಾಗಿರುವುದು ಕಂಪ್ಯೂಟರ್‍ನ  ಸಾಮಾನ್ಯ  ಜ್ಞಾನ.  ಆ ಹುದ್ದೆಗಳಿಗೆ  ಬೇಕಾಗಿರುವುದು ಜನಸಾಮಾನ್ಯರೊಂದಿಗೆ  ಅನುಕಂಪ, ಸಹನೆ,  ಮಂದಹಾಸಗಳಿಂದ  ವ್ಯವಹರಿಸುವ  ಸಹಾಯಕ ಮನೋಭಾವ. ಕರ್ನಾಟಕದಲ್ಲಿರುವ ಹುದ್ದೆಗಳಿಗೆ  ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಬೇಕಾದುದು ಕನ್ನಡಿಗರ  ನಡುವೆಯೇ ಹೊರತು  ಅಖಿಲ ಭಾರತ  ಮಟ್ಟದಲ್ಲಿ ಅಲ್ಲ. ಆದ್ದರಿಂದ,  ಐಬಿಪಿಎಸ್  ಪರೀಕ್ಷೆಯಲ್ಲಿ  ಕನ್ನಡದಲ್ಲೂ ಉತ್ತರಿಸುವ  ಅವಕಾಶ ಸೃಷ್ಟಿಯಾಗಬೇಕು.    ಇದು ಇತರ ಭಾಷೆಗಳಿಗೂ ಅನ್ವಯವಾಗುತ್ತದೆ.
   
ಐಬಿಪಿಎಸ್  ಪರೀಕ್ಷೆಗಳನ್ನು ಎದುರಿಸಲು ಲಕ್ಷಾಂತರ ರೂಪಾಯಿ ಫೀಸ್  ಕೊಟ್ಟು 12 ರಿಂದ  18 ತಿಂಗಳುಗಳ ತರಬೇತಿ ಪಡೆಯುವ  ಪರಿಸ್ಥಿತಿ  ನಿರ್ಮಾಣವಾಗಿದೆ. ಅಷ್ಟೊಂದು ಹಣ ನೀಡಿ  ತರಬೇತಿ ಪಡೆಯಲು ಸಾಧ್ಯವಾಗದವರು ಪರೀಕ್ಷೆಯಲ್ಲಿ ಯಶಸ್ಸು ಕಾಣುವುದು ವಿರಳವಾಗತೊಡಗಿದೆ. ಇದರಿಂದಾಗಿ ಬಡ ಮತ್ತು ಮಧ್ಯಮ ವರ್ಗದ   ಪ್ರತಿಭಾವಂತರು ಅವಕಾಶ ವಂಚಿತರಾಗುತ್ತಿದ್ದಾರೆ.   
     
ಇಂತಹ  ಸಾಮಾಜಿಕ  ಅಸಮಾನತೆಯ  ವ್ಯವಸ್ಥೆಯ ವಿರುದ್ಧ ಹಾಗೂ ಕನ್ನಡನಾಡಿನ ಉದ್ಯೋಗ ಕನ್ನಡಿಗರಲ್ಲದವರ ಪಾಲಾಗುತ್ತಿರುವುದರ  ವಿರುದ್ಧ ಕನ್ನಡಿಗರ  ಪರ  ಸಂಘಟನೆಗಳು ಧ್ವನಿ  ಎತ್ತಿವೆ. ಕನ್ನಡ ನಾಡಿನ ನೆಲ, ಜಲ  ಮೂಲ ಸೌಕರ್ಯಗಳನ್ನು ಬಳಸಿ, ಇಲ್ಲಿನ ಜನರ  ಠೇವಣಿಗಳನ್ನು ಪಡೆದು ವ್ಯವಹಾರ ನಡೆಸಿ,   ಲಾಭ ಗಳಿಸುತ್ತಾ  ಉದ್ಯೋಗ ನೀಡಿಕೆಯಲ್ಲಿ  ಕನ್ನಡಿಗರನ್ನು  ವಂಚಿಸುತ್ತಿರುವ  ಬ್ಯಾಂಕ್ ನೇಮಕಾತಿಯ ವಿರುದ್ಧ ಕನ್ನಡಿಗರು ಸಿಡಿದೇಳುತ್ತಿದ್ದಾರೆ.
 
ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡು,  ಐಬಿಪಿಎಸ್ ನೇಮಕಾತಿ  ವಿಧಾನದಲ್ಲಿ   ಸೂಕ್ತ ಮಾರ್ಪಾಡು ಮಾಡಿ, ಕನ್ನಡ  ಹಾಗೂ ಇತರ ಪ್ರಾದೇಶಿಕ ಭಾಷೆಗಳಲ್ಲಿ  ಪರೀಕ್ಷೆ   ಬರೆಯುವ  ಅವಕಾಶ ಸೃಷ್ಟಿಸಬೇಕಾದುದು ಹಾಗೂ ಪ್ರಾದೇಶಿಕ   ಭಾಷೆ ಬಲ್ಲವರನ್ನೇ   ಶಾಖೆಗಳಿಗೆ  ನಿಯೋಜಿಸುವ  ವಿಧಾನ ಅನುಸರಿಸುವಂತೆ   ಬ್ಯಾಂಕ್‍ಗಳಿಗೆ  ನಿರ್ದೇಶಿಸುವುದು ತುರ್ತು ಅಗತ್ಯ. 

ರಾಜ್ಯ ಸರ್ಕಾರ ,  ಹೊಸದಾಗಿ ಚುನಾಯಿತರಾಗುವ  ಲೋಕಸಭಾ ಸದಸ್ಯರಿಗೆ ಕೇಂದ್ರ ಸರ್ಕಾರದ  ಮೇಲೆ  ಒತ್ತಡ ಹೇರಬೇಕಾದ  ಹೊಣೆಗಾರಿಕೆಯಿದೆ.  ಕರ್ನಾಟಕದ  ಉದ್ಯೋಗ ಕನ್ನಡಿಗರಿಗೇ ಎಂದು ಕನ್ನಡಿಗರ  ಸಂಘಟನೆಗಳು ನಡೆಸುತ್ತಿರುವ ಅಭಿಯಾನ ಕಾಡ್ಗಿಚ್ಚಿನಂತೆ ವ್ಯಾಪಿಸಿ ಮಹತ್ತರ  ಪರಿವರ್ತನೆಗೆ ಕಾರಣವಾಗುವುದು ನಿಶ್ಚಿತ.

- ಗಣೇಶ ಭಟ್ಟ ಶಿರಸಿ
#KarnatakaJobForKannadigas
#JobForAllKannadigas

ಕಾಮೆಂಟ್‌ಗಳು

  1. ಮೊದಲು ಈ ರಾಷ್ಟೀಯ ಪಕ್ಷ ಗಳನ್ನು ಸುಟ್ಟು ಹಾಕಿ. ದೇಶಿ ಪಕ್ಷ ಬರಬೇಕು. ಕನ್ನಡಿಗರಿಗೆ ಆದ್ಯತೆ ಕೊಡೋ ಮುಖ್ಯಮಂತ್ರಿ ಬರಬೇಕು. ಕೇಂದ್ರ ಸರಕಾರ ಕ್ಕೆ ತಿರುಗೇಟು ಕೊಡಬೇಕು. ಕರ್ನಾಟಕ ದಲ್ಲಿ ಕನ್ನಡ ಕಡ್ಡಾಯ ಮಾಡಬೇಕು.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹಿಂದಿ ನುಡಿಯ ದಾಸ್ಯ ಸ್ವೀಕರಿಸಿದ ರಾಜ್ಯ ಸರ್ಕಾರದಿಂದಲೇ ನಡೆಯುತ್ತಿದೆ ಕನ್ನಡದ ಕಡೆಗಣನೆ

CAB ಬಗ್ಗೆ ರಾಜಾರಾಂ ತಲ್ಲೂರು ಅವರ ಬರಹವನ್ನು ದಯವಿಟ್ಟು ಓದಿ, ಹಂಚಿಕೊಳ್ಳಿ | ಕನ್ನಡಿಗರಿಗೂ ಸಂಭಂದಿಸಿದೆ ಇದು|

Exploiting the South: How the Central Government Systematically Undermines South Indian States