ಎಲ್ಲಿಗೆ ಬಂತು ನೆರೆ ಪರಿಹಾರ! ಕಣ್ಣು ಮುಚ್ಚಿ ಕುಳಿತ ಕೇಂದ್ರ ಮತ್ತು ರಾಜ್ಯ ಸರಕಾರ
ನೆರೆ ಬಂದು ತಿಂಗಳುಗಳೇ ಕಳೆದವು. ನೆರೆಯಲ್ಲಿ ನೊಂದವರ ಕುರಿತ ಚರ್ಚೆ ಆಗಲೇ ತೆರೆಮರೆಗೆ ಸರಿಯುತ್ತಿದೆ. ಕೇಂದ್ರದಿಂದ ಪರಿಹಾರ ಕನ್ನಡಿಯೊಳಗಿನ ಗಂಟಾಗಿಯೇ ಉಳಿದಿದೆ. ಎಲ್ಲಿಂದ ಪರಿಹಾರ ತರಲಿ ಅಂತ ದಾರಿ ಕಾಣದ ರಾಜ್ಯ ಸರ್ಕಾರ ಎಲ್ಲ ಇಲಾಖೆಗಳ ಇರುವ ಬರುವ ರಿಸರ್ವ್ ನಿಧಿಯನ್ನೆಲ್ಲ ಬಳಸಿಕೊಳ್ಳುವ ಪ್ರಯತ್ನದಲ್ಲಿದೆ.
ಇನ್ನೊಂದೆಡೆ ವಿದ್ಯಾರ್ಥಿಗಳು ಚಂದಾ ಸಂಗ್ರಹಿಸಲಿ, ಕ್ರಿಕೆಟ್ ಮ್ಯಾಚ್ ಅಲ್ಲಿ ಸಹಾಯ ಕೇಳೊಣ, ಕೋಟ್ಯಾಧಿಪತಿ ಆಟ ಆಡಿ ಸಂಗ್ರಹಿಸೋಣ ಅನ್ನುವ ಪ್ರಯತ್ನಗಳು ನಡೆಯುತ್ತಿವೆಯೇ ಹೊರತು ದೆಹಲಿಯಲ್ಲಿ ಲಾಬಿ ಮಾಡಿ ಪರಿಹಾರ ತರುವ ಧೈರ್ಯ ಕಾಣುತ್ತಿಲ್ಲ. ಕರ್ನಾಟಕದ ರಾಜಕೀಯ ನಾಯಕತ್ವ ತನ್ನನ್ನು ತಾನೇ ಎಷ್ಟು ಬಲಹೀನವಾಗಿಸಿಕೊಂಡಿದೆ ಅನ್ನುವುದು ಸ್ಪಷ್ಟವಾಗಿ ಕಾಣುತ್ತಿದೆ.
ವಿರೋಧ ಪಕ್ಷಗಳೂ ಒಂದು ನಿರ್ಣಾಯಕವಾದ ರೀತಿಯ ಹೋರಾಟದ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವಲ್ಲಿ ಸೋತಿವೆ. ಈ ಹೊತ್ತಲ್ಲಿ ಬಂದೆರಗಿರುವ ಉಪಚುನಾವಣೆ ಮೂರೂ ಪಕ್ಷಗಳ ಫೋಕಸ್ ಅನ್ನು ಇನ್ನೊಂದು ತಿಂಗಳು ಚುನಾವಣೆಯತ್ತ ಎಳೆಯುವುದರಿಂದ ಅಲ್ಲಿಯವರೆಗೆ ಸೂರು ಕಳೆದುಕೊಂಡವರು, ತಿನ್ನಲು ಏನೂ ಸಿಗದವರು ಎಲ್ಲಿದ್ದಾರೋ ಅಲ್ಲೇ ಅಡ್ಜಸ್ಟ್ ಮಾಡಿಕೊಳ್ಳಬೇಕು.
ಬೆಂಗಳೂರಿನ ಉತ್ತರ ಕರ್ನಾಟಕ ಸಂಘಗಳೆಲ್ಲ ಮಲಗಿ ನಿದ್ದೆ ಹೋಗಿವೆ. ಮಹದಾಯಿ ಹೊತ್ತಲ್ಲಿ ಎಷ್ಟೆಲ್ಲ ಪ್ರತಿಭಟನೆ ಹಮ್ಮಿಕೊಂಡಿದ್ದ, ಪ್ರತ್ಯೇಕ ರಾಜ್ಯದ ಕೂಗೂ ಎಬ್ಬಿಸಿದ್ದವರೆಲ್ಲ ಈಗ ಯಾಕೋ ತಣ್ಣಗಾಗಿ ಹೋಗಿದ್ದಾರೆ. ಕುಮಾರಸ್ವಾಮಿ ಸಿಎಂ ಆಗಿದ್ದಿದ್ರೆ ಇಷ್ಟೊತ್ತಿಗೆ ಪ್ರತ್ಯೇಕ ರಾಜ್ಯದ ಕೂಗು ಬಲವಾಗೇ ಕೇಳುತ್ತಿತ್ತು. ಪುಣ್ಯಕ್ಕೆ ಅವರು ಇಳಿದು ಹೋಗಿದ್ದು ಕರ್ನಾಟಕದ ಒಗ್ಗಟ್ಟಿನ ನಿಟ್ಟಿನಲ್ಲಿ ಸದ್ಯಕ್ಕಂತೂ ಒಳ್ಳೆಯದನ್ನೇ ಮಾಡಿದೆ.
ಸದ್ಯಕ್ಕಂತೂ ಉದಯವಾಗಿದೆ ನಮ್ಮ ಚೆಲುವ ಕನ್ನಡ ನಾಡು, ಚಿನ್ನದ ಬೀಡು. :)
Vasant Shetty
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ