ಬೆಂಗಳೂರು ಯಾಕೆ ಸಿಂಗಾಪುರ ಆಗಲ್ಲ ಅಂತಂದ್ರೆ....
ಸಿಂಗಾಪುರಕ್ಕೆ ಒಮ್ಮೆ ಹೋಗಿದ್ದಾಗ ಅಲ್ಲಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಅಚ್ಚುಕಟ್ಟುತನ, ಸಮಯಪಾಲನೆ, ಒಂದು ಮಗುವಿನಿಂದ ಹಿಡಿದು ಒಬ್ಬ ವಯಸ್ಸಾದವರೆಗೆ ಎಲ್ಲರಿಗೂ ಅನುಕೂಲ ಕಲ್ಪಿಸುವ ಯೋಚನೆ ಕಂಡು ಬೆರಗಾಗಿದ್ದೆ. ಅಲ್ಲಿನ ರಸ್ತೆಗಳಲ್ಲಿ ಖಾಸಗಿ ವಾಹನಗಳನ್ನು ಓಡಿಸುವುದು ಬಹು ಖರ್ಚಿನ ಬಾಬತ್ತಾಗಿಸಿದ್ದ ಸರ್ಕಾರ ಪ್ರತಿಯೊಬ್ಬರು ಸಾರ್ವಜನಿಕ ಸಾರಿಗೆಯನ್ನು ಬಯಸಿ ಬಳಸುವಂತೆ ಏರ್ಪಾಡುಗಳನ್ನು ಕಟ್ಟಿದೆ. ಅಲ್ಲಿ ವರ್ಷಕ್ಕೆ ಸಾವಿರ ಖಾಸಗಿ ವಾಹನಗಳನ್ನು ರಸ್ತೆಗೆ ಇಳಿಸಬಹುದು, ಕಾರೆನೋ ಕೊಳ್ಳಬಹುದು, ಆದರೆ ಅದರ ರೆಜಿಸ್ಟ್ರೇಶನ್ ಮಾಡಿಸಲು ಪರ್ಮಿಟ್ ಅನ್ನು ಹರಾಜಿನಲ್ಲಿ ಕೊಳ್ಳಬೇಕು. ಅಲ್ಲಿಗೆ ಹತ್ತು ಲಕ್ಷದ ಕಾರು ಕೊಂಡು ರಸ್ತೆಗೆ ತರಲು ಒಂದು ಕೋಟಿ ಖರ್ಚು ಅಂತ ಕೇಳ್ಪಟ್ಟೆ. ಒಟ್ಟಾರೆ ಜನರನ್ನು ಖಾಸಗಿ ವಾಹನದ ಮಾಲಿಕತ್ವದಿಂದ ದೂರ ಇಡಬೇಕು ಅನ್ನುವುದು ಅಲ್ಲಿನ ಸರ್ಕಾರದ ಆಲೋಚನೆ.
ಬೆಂಗಳೂರಲ್ಲಿ ರಸ್ತೆಯ ಕ್ಯಾಪಾಸಿಟಿ ಇರೋದು 7.5 ಲಕ್ಷ ವಾಹನಗಳಿಗೆ, ಆದರೆ ರಸ್ತೆಯ ಮೇಲಿರೋದು 70 ಲಕ್ಷಕ್ಕೂ ಹೆಚ್ಚು ವಾಹನಗಳು. ಸಾರ್ವಜನಿಕ ಸಾರಿಗೆಯನ್ನು ಅತ್ಯದ್ಭುತವಾಗಿ ಕಟ್ಟಬೇಕು, ಖಾಸಗಿ ವಾಹನಗಳ ಬಳಕೆ ಕಡಿಮೆಯಾಗಿಸಬೇಕು, ಆ ಮೂಲಕ ಮಾಲಿನ್ಯ, ಟ್ರಾಫಿಕ್ ಕಡಿಮೆ ಮಾಡಬೇಕು ಅನ್ನುವ ಆಸಕ್ತಿ ಹಿಂದಿನಿಂದ ಇಂದಿನ ಯಾವ ಸರ್ಕಾರಗಳಿಗೂ ಇಲ್ಲ. ಅದಕ್ಕೆ ಒಂದು ಮುಖ್ಯ ಕಾರಣ ವಾಹನ ನೊಂದಾವಣೆಯಿಂದ ಸರ್ಕಾರಕ್ಕೆ ಬರುವ ತೆರಿಗೆ ಆದಾಯ. ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಕಾನೂನು ಸುವ್ಯವಸ್ಥೆ, ನೀರು, ವಿದ್ಯುತ್, ಆರೋಗ್ಯ ಸೇವೆ, ಶಿಕ್ಷಣ ಹೀಗೆ ಜನರ ಏಳಿಗೆಗೆ ಮುಖ್ಯವಾದ ಎಲ್ಲವನ್ನೂ ಕಲ್ಪಿಸುವ ಹೊಣೆ ರಾಜ್ಯ ಸರ್ಕಾರದ್ದಾದರೂ ಅದಕ್ಕೆ ಬೇಕಿರುವ ಸಂಪನ್ಮೂಲ ಹೊಂದಿಸಿಕೊಳ್ಳಲು ರಾಜ್ಯ ಸರ್ಕಾರಗಳಿಗೆ ಸಾಕಷ್ಟು ತೊಂದರೆ ಇದೆ. ಒಂದು ರಾಜ್ಯ ಹೂಡಿಕೆಗೆ, ಉದ್ಯೋಗ ಹುಟ್ಟುಹಾಕಲು ಬೇಕಿರುವ ಪೂರಕ ವಾತಾವರಣ ತನ್ನ ವೆಚ್ಚದಲ್ಲೇ ಕಲ್ಪಿಸಿದರೂ ಹೀಗೆ ಹುಟ್ಟುವ ಉದ್ಯಮ, ಉದ್ಯೋಗಗಳಿಂದ ಬರುವ ಕಾರ್ಪೋರ್ರೇಟ್ ತೆರಿಗೆ ಆಗಲಿ, ಆದಾಯ ತೆರಿಗೆಯಾಗಲಿ ನೇರವಾಗಿ ರಾಜ್ಯಗಳಿಗೆ ದಕ್ಕುವುದಿಲ್ಲ. ಅದೆಲ್ಲವೂ ಕೇಂದ್ರದ ಪಾಲಾಗುತ್ತದೆ (ಆನಂತರ ಹಣಕಾಸು ಆಯೋಗದ ಅಣತಿಯಂತೆ ಒಂದಿಷ್ಟು ಹಣ ಮರಳಿ ಬರುತ್ತದೆಯಾದರೂ ನಮ್ಮಿಂದ ಹೋದ ಹಣಕ್ಕೂ ನಮಗೆ ಬರುವ ಹಣಕ್ಕೂ ದೊಡ್ಡ ಅಂತರವೇ ಇದೆ ಮತ್ತು ನಮ್ಮ ಹಣವೆಲ್ಲವೂ ಉತ್ತರದ ರಾಜ್ಯಗಳನ್ನು ಸಾಕಲು ಹೋಗುತ್ತಿದೆ ಅನ್ನುವುದು ಒಂದು ಒಪನ್ ಸಿಕ್ರೇಟ್) ಹೀಗಾಗಿ ರಾಜ್ಯಗಳು ತನ್ನದೇ ಆದಾಯ ಹೆಚ್ಚಿಸಿಕೊಳ್ಳಲು ಇರುವ ಹಾದಿಯೆಂದರೆ ವ್ಯಾಟ್, ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆ, ಅಲ್ಕೋಹಾಲ್ ಮೇಲೆ ಹಾಕುವ ತೆರಿಗೆ, ಆಸ್ತಿ ಮತ್ತು ವಾಹನ ನೊಂದಾವಣೆ ತೆರಿಗೆ. ಈ ಕೆಲ ಆದಾಯ ಮೂಲಗಳಿಂದಲೇ ರಾಜ್ಯ ತನ್ನ ಆದಾಯ ದಕ್ಕಿಸಿಕೊಳ್ಳಬೇಕಾಗಿರುವುದರಿಂದಲೇ ರಾಜ್ಯ ಸರ್ಕಾರಕ್ಕೆ ಸಾರಾಯಿ ಅಂಗಡಿಗಳನ್ನು ಕಡಿಮೆ ಮಾಡುವ ಮನಸ್ಸಾಗಲಿ, ವಾಹನಗಳ ಸಂಖ್ಯೆ ಕಡಿಮೆ ಮಾಡಬೇಕು ಅನ್ನುವ ಆಸೆಯಾಗಲಿ ಕಾಣಿಸಲ್ಲ. ಜೊತೆ ಜೊತೆಯಲ್ಲೇ ನಗರದಿಂದಲೇ ಈ ಬಹುತೇಕ ಆದಾಯ ಬರುತ್ತಿದ್ದು, ಅದನ್ನು ರಾಜ್ಯದ ಇತರೆ ಭಾಗಗಳ ಅಭಿವೃದ್ಧಿಗೂ ಬಳಸಬೇಕಾದ ಒತ್ತಡವಿರುವುದರಿಂದ ಬೆಂಗಳೂರಿಗೂ ಬೇಕಾದಷ್ಟು ಸಂಪನ್ಮೂಲ ಸಿಗದೇ ಬೆಂಗಳೂರೂ ಒದ್ದಾಡುತ್ತಿದೆ. (ಬೆಂಗಳೂರಿನ ಸಮಸ್ಯೆಗಳ ಹಿಂದೆ ಕರಪ್ಷನ್ ಅತೀ ದೊಡ್ಡ ಕಾರಣ ಅನ್ನುವ ವಾದವೂ ನಿಜವಿದೆ. ಆದರೆ ಅದೊಂದೇ ಕಾರಣವಲ್ಲ)
ಇದರ ನಡುವೆ ಜಿ.ಎಸ್.ಟಿ ಬಂದು ರಾಜ್ಯದ ಆದಾಯ ಮೂಲಗಳಲ್ಲಿ ಕೆಲವನ್ನು ಕಿತ್ತುಕೊಂಡಿದೆ. ಇನ್ನು ಕೆಲವುಗಳ ಮೇಲೆ ಕಣ್ಣು ಹಾಯಿಸಿ ಕೂತಿದೆ. ಒಂದು ಸಮಸ್ಯೆಗೆ ಹಲವು ಮುಖಗಳಿರುತ್ತವೆ. ಬೆಂಗಳೂರಿನ ಮಿತಿಮೀರಿದ ವಾಹನಗಳ ಸಂಖ್ಯೆಯ ಹಿಂದೆ ಇದೂ ಒಂದು ಆಯಾಮ.
ಸಿಂಗಾಪುರದಲ್ಲಿ ಮುಂದಿನ ಫೆಬ್ರವರಿಯಿಂದ ಯಾವುದೇ ಹೊಸ ವಾಹನ ಬೀದಿಗೆ ಇಳಿಸಲ್ಲ ಅಂತ ಓದಿದಾಗ ಇದೆಲ್ಲ ಬರೆಯಬೇಕು ಅನ್ನಿಸಿತು. #Federalism
- ವಸಂತ್ ಶೆಟ್ಟಿ ( ಬನವಾಸಿ ಬಳಗ)
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ