ಕರ್ನಾಟಕ ಏಕೀಕರಣದ ಹೋರಾಟಕ್ಕೆ ತಿರುವು ಕೊಟ್ಟ ಹುಬ್ಬಳ್ಳಿಯ ಆ ಗಲಭೆ........!

ಕರ್ನಾಟಕ ಏಕೀಕರಣ ಚಳುವಳಿಯು ಪ್ರಮುಖ ತಿರುವು ಕಂಡದ್ದು ಹುಬ್ಬಳ್ಳಿ ಗಲಭೆಯ ಮೂಲಕ . ಆ ಮೊದಲು ವಾಂಛಿ ಸಮಿತಿಯ ಮೂಲಕ ಆಂಧ್ರ ಪ್ರದೇಶದ ರಚನೆಗೆ ಅವಕಾಶ ಲಭ್ಯವಾಗಿತ್ತಾದರೂ , ಬಳ್ಳಾರಿ ತಾಲ್ಲೂಕಿನ ಸಮಸ್ಯೆಯನ್ನು ಬಗೆಹರಿಸಲು . ೨೫ - ೩ - ೧೯೫೩ರಂದು ಲೋಕಸಭೆಯಲ್ಲಿ ಚರ್ಚೆ ನಡೆದು , ಮಿಶ್ರಾ ಸಮಿತಿಯ ನೇಮಕದ ಸುಳಿವು ದೊರೆತಿತ್ತು . ಹೀಗೇ ಮುಂದುವರಿದರೆ , ಕರ್ನಾಟಕ ಪ್ರಾಂತರಚನೆಯು ಗಗನ ಕುಸುಮ ಆಗಿಬಿಡುವ ಅತಂಕ ಕೆಲವರನ್ನಾದರೂ ಕಾಡಿತ್ತು . ಮಿಶ್ರಾ ಸಮಿತಿಯ ನೇಮಕದ ಸುಳಿವು ದೊರೆತು , ಅಸಮಾಧಾನಗೊಂಡ ಅನೇಕರ ಪೈಕಿ ಹುಬ್ಬಳ್ಳಿ ತಾಲ್ಲೂಕು ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದ ಅದರಗುಂಚಿ ಶಂಕರಗೌಡ ಪಾಟೀಲರು ೨೮ - ೩ - ೧೯೫೩ರಿಂದ ತಮ್ಮ ಊರಿನ ಕಲ್ಲೇಶ್ವರ ದೇವಾಲಯದಲ್ಲಿ ಕರ್ನಾಟಕ ಏಕೀಕರಣ ಆಗುವ ಭರವಸೆ ಬರುವವರೆಗೆ ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡುವ ನಿರ್ಧಾರವನ್ನು ಪ್ರಕಟಿಸಿದರು . ಶಂಕರಗೌಡರ ಆಮರಣಾಂತ ಉಪವಾಸ ಸತ್ಯಾಗ್ರಹದ ವಿಷಯವು ಮೊದಲ ಎರಡು ದಿನ ಹೆಚ್ಚು ಜನರ ಗಮನ ಸೆಳೆಯಲಿಲ್ಲ . ನಂತರ ರಾಜ್ಯದ ಮಾತ್ರವಲ್ಲದೆ ರಾಷ್ಟ್ರದ ಬಹುತೇಕ ಪತ್ರಿಕೆಗಳಲ್ಲಿ ಶಂಕರಗೌಡರ ಉಪವಾಸ ಸತ್ಯಾಗ್ರಹದ ವಿಚಾರ ಪ್ರಕಟಗೊಂಡು ರಾಷ್ಟ್ರದ ಗಮನ ಸೆಳೆಯಿತು . ಉಪವಾಸವನ್ನು ಆರಂಭಿಸಿದ ಶಂಕರಗೌಡರನ್ನು ಹತ್ತಿರದಿಂದ ನೋಡುತ್ತಿದ್ದ ಜನ ಆತಂಕದಿಂದ ಸಿಟ್ಟಿಗೆದ್ದರು . 


೧೯ - ೪ - ೧೯೫೩ರಂದು ಹುಬ್ಬಳ್ಳಿಯ ಪುರಸಭಾ ಭವನದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವಿಶೇಷ ಕಾರ್ಯಕಾರೀ ಸಭೆಯನ್ನು ಹಮ್ಮಿಕೊಳ್ಳಲು ಕಾಂಗ್ರೆಸ್ ಸಮಿತಿ ನಿರ್ಧರಿಸಿತ್ತು . ಈ ವಿಷಯವು ಕಾಂಗ್ರೆಸ್ಸೇತರ ಪಕ್ಷಗಳ ನಾಯಕರಿಗೂ ತಿಳಿದಿತ್ತು . ಅವರ ಮೂಲಕ ಕರ್ನಾಟಕ ಏಕೀಕರಣ ಪರವಾಗಿದ್ದ ಜನರಿಗೆಲ್ಲಾ ತಿಳಿಯಿತು . ಇನ್ನೇನು ಕರ್ನಾಟಕ ರಾಜ್ಯ ರಚನೆ ಆಗಿಯೇಹೋಯಿತು ಎಂಬ ಮಾತುಗಳನ್ನೇ ಆಡುತ್ತಾ , ಆಗದಿದ್ದರೆ ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿಯೇಬಿಟ್ಟೆವು ಎಂದು ಘೋಷಣೆಗಳನ್ನು ಮಾಡುತ್ತಲೇ ಇದ್ದ ಕಾಂಗ್ರೆಸ್ ನಾಯಕರ ಬಗ್ಗೆ ಜನರಿಗೆ ತೀವ್ರ ಅಸಮಾಧಾನ ಇತ್ತು . ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ನಡೆಯಲಿದ್ದ ಕಾರ್ಯಕಾರೀ ಸಮಿತಿಯ ಸಭೆಗೆ ಆಗಮಿಸುವ ಎಲ್ಲ ಹಿರಿಯ ಕಾಂಗ್ರೆಸ್ ನಾಯಕರನ್ನು ಘೋರಾಯಿಸಿ , ಅವರಿಂದ ಅವರ ಶಾಸನ ಸಭೆ ಅಥವಾ ಲೋಕಸಭೆಯ ಸ್ಥಾನಗಳಿಗೆ ರಾಜೀನಾಮೆಯನ್ನು ಪಡೆಯಲು ನಿರ್ಧರಿಸಲಾಯಿತು .

ಹುಬ್ಬಳ್ಳಿಯ ಕಾಂಗ್ರೆಸ್ಸೇತರ ನಾಯಕರು ೧೯-೪-೧೯೫೩ರಂದು ಕಾಂಗ್ರೆಸ್ ನಾಯಕರನ್ನು ಪ್ರತಿಭಟಿಸುವ ವಿಚಾರವಾಗಿ ಕ್ರಮಗಳನ್ನು ರೂಪಿಸಿಕೊಂಡಿದ್ದರು . ೧೮ನೆಯ ತಾರೀಕು ಹುಬ್ಬಳ್ಳಿಯಲ್ಲಿ ಸಭೆಯನ್ನು ನಡೆಸಿದ ಕಾಂಗ್ರೆಸ್ಸೇತರ ನಾಯಕರು ಜನರನ್ನು ಸಂಘಟಿಸುವಲ್ಲಿ ಯಶಸ್ವಿಯಾಗಿದ್ದರು . ಉತ್ತರ ಕರ್ನಾಟಕದ ಬಹುತೇಕ ಭಾಗಗಳಿಂದ ತಂಡೋಪತಂಡವಾಗಿ ಜನರು ಚಕ್ಕಡಿಗಳಲ್ಲಿ ಹುಲ್ಲನ್ನು ಹೇರಿಕೊಂಡು ಬಂದು ಹುಬ್ಬಳ್ಳಿಯ ಗುಳಕವ್ವನಕಟ್ಟೆಯಲ್ಲಿ ೧೯ನೆಯ ತಾರೀಕು ಬೆಳಗಿನಿಂದಲೇ ಬೀಡುಬಿಟ್ಟಿದ್ದರು . ಸಂಜೆ ೪ ಘಂಟೆಯ ವೇಳೆಗೆ ಗುಳಕವನಕಟ್ಟೆಯಲ್ಲಿ ಇಪ್ಪತ್ತೈದು ಸಾವಿರಕ್ಕೂ ಹೆಚ್ಚು ಜನ ಸೇರಿದ್ದರು .

ಹೆಚ್ಚು ಜನ ಸೇರುವ ನಿರೀಕ್ಷೆಯಿಂದ ಪೋಲೀಸ್ ಬಂದೋಬಸ್ತ್ ಕೂಡಾ ಬಲವಾಗಿತ್ತು . ಆಗ ಆ ಭಾಗದ ಎಸ್ . ಪಿ . ಆಗಿದ್ದವರು ರೆಬೆಲೋ , ಡಿ . ಎಸ್ . ಪಿ . ಆಗಿದ್ದವರು ಕಾಂಬಿ ಮತ್ತು ಹುಬ್ಬಳ್ಳಿಯ ತಹಸೀಲ್ದಾರ್‌ ಆಗಿದ್ದವರು ಎಲ್‌ . ಆರ್‌ . ನಾಯಕ್ . ಸಮಾವೇಶಗೊಂಡಿದ್ದ ಜನ ಕೇಳುತ್ತಿದ್ದ ಒಂದೇ ಪ್ರಶ್ನೆ . ' ಅವರು ರಾಜೀನಾಮೆ ಕೊಟ್ಟರೇನು ? ' ಜನಸಂದಣಿಯ ಮುಂಚೂಣಿಯಲ್ಲಿದ್ದವರು ಎ . ಜೆ . ಮುಧೋಳ್ ಮತ್ತು ಸಿದ್ದಪ್ಪ ಕಮ್ಮಾರ್ , ಇಬ್ಬರೂ ಭಾರತೀಯ ಕಮ್ಯುನಿಸ್ಟ್ ಪಕ್ಷದ ಮುಖಂಡರು . 
ಕಾಂಗ್ರೆಸ್ ನಾಯಕರು ಪುರಸಭಾ ಭವನವನ್ನು ಸಮೀಪಿಸುತ್ತಿದ್ದಂತೆಯೇ ಉದ್ರಿಕ್ತ ಜನ ಅವರಿಗೆ ಘರಾವ್ ಮಾಡಿ , ರಾಜೀನಾಮೆ ಪತ್ರ ಕೇಳಿ , ಕೆನ್ನೆಗೆ ಅರಿಶಿನ ತೊಡೆದು , ಹಣೆಗೆ ಕುಂಕುಮ ಹಚ್ಚಿ , ಕೈಗಳಿಗೆ ಬಳೆ ತೊಡಿಸಿ , ತಲೆಗೆ ಹೂ ಮುಡಿಸುತ್ತಿದ್ದರು . ಕಷ್ಟಪಟ್ಟು ಕಾಂಗ್ರೆಸ್ ನಾಯಕರು ಪುರಭವನವನ್ನು ಸಮೀಪಿಸುತ್ತಿದ್ದರು . ಜನರ ಗಲಭೆ ಹೆಚ್ಚಿದ ಸಂದರ್ಭದಲ್ಲಿ ಯಾರೋ ಟಿ . ಆರ್‌ . ನೇಸ್ವಿಗೆ ಅವರಿಗೆ ಹೊಡೆದರು . ಯಾರೋ ಗುದ್ದೆಪ್ಪ ಹಳ್ಳಿಕೇರಿ ಅವರ ಜೀಪಿಗೆ ಬೆಂಕಿ ಇಟ್ಟರು . ಗಲಭೆ ಹೆಚ್ಚುವ ಸೂಚನೆಗಳನ್ನು ಗುರುತಿಸಿದ ಪೊಲೀಸರು ಲಾಠಿ ಛಾರ್ಜ್ ಮಾಡುವ ಎಚ್ಚರಿಕೆ ನೀಡಿದರು . ಅದಕ್ಕೆ ಮುಂಚೂಣಿಯಲ್ಲಿದ್ದ ಜನ ಹೆದರಲಿಲ್ಲ . ಬದಲಿಗೆ ಎದೆಯೊಡ್ಡಿ ನಿಂತು ' ಲಾಠಿ ಛಾರ್ಜ್ ಮಾಡ್ತೀರೇನು ! ಮಾಡಿ ' ಎಂದು ಸವಾಲು ಹಾಕಿದರು . ಆ ಹೊತ್ತಿಗೆ ಕತ್ತಲು ಕವಿಯುತ್ತಿತ್ತು . 

ಅದೇ ಸಮಯದಲ್ಲಿ ಗುಳಕವನ ಕಟ್ಟೆಯ ಮೈದಾನದಲ್ಲಿ ಪ್ರಕಾಶ ಸರ್ಕಸ್ ನಡೆಯುತ್ತಿತ್ತು . ಗಲಭೆ ಹೆಚ್ಚುತ್ತಿದ್ದಂತೆ ಹೇಗೋ ಸರ್ಕಸ್‌ನ ಎರಡು ಹುಲಿಗಳು ಹೊರಕ್ಕೆ ಬಂದವು . ಜನರ ಗದ್ದಲದ ಜೊತೆಗೆ ಹುಲಿಗಳು ಹೊರಬಿದ್ದ ಸುದ್ದಿಯಿಂದ ಜನರು ದಿಕ್ಕುತಪ್ಪಿದಂತೆ ಓಡಲಾರಂಭಿಸಿದರು . ರೆಬೆಲೋ ಎರಡನೆಯ ಬಾರಿಗೆ ಲಾಠೀ ಛಾರ್ಜ್ ಮಾಡುವ ಸೂಚನೆ ನೀಡಿದರು . ಜನರು ಪೋಲೀಸರ ವಿರುದ್ಧ ತಿರುಗಿಬಿದ್ದರು. ಕಲ್ಲು ತೂರಾಟ ಆರಂಭವಾಯಿತು . ಪುರಸಭಾ ಭವನದ ತುಂಬಾ ಕಲ್ಲು ಬಿದ್ದವು . ಕಲ್ಲುಗಳು ಪೋಲೀಸರನ್ನೇ ಗುರಿ ಮಾಡಿಕೊಂಡಾಗ ಲಾಠೀ ಛಾರ್ಜ್‌ಗೆ ಆದೇಶ ನೀಡಲಾಯಿತು.

ಹೆದರಿದ ಕೆಲವು ಜನ ಗುಳಕವ್ವನಕೆರೆಯ ಒಂದು ಅಂಚಿಗಿದ್ದ ದೊಡ್ಡ ಚರಂಡಿಯನ್ನು ದಾಟಿ ಮರಾಠಾ ಗಲ್ಲಿಯತ್ತ ಓಡಿದರು . ಉದ್ರಿಕ್ತಗೊಂಡಿದ್ದ ಕೆಲವರು ಕಲ್ಲು ತೂರಾಟವನ್ನು ಮುಂದುವರಿಸಿದ್ದರು . ಹಳ್ಳಿಕೇರಿ ಗುದ್ದೆಪ್ಪನವರ ಜೀಪಿಗೆ ಹೊತ್ತಿದ್ದ ಬೆಂಕಿಯನ್ನು ಆರಿಸಲು ಬಂದಿದ್ದ ಅಗ್ನಿಶಾಮಕ ವಾಹನದ ಮೇಲೂ ಜನ ಧಾಳಿ ಮಾಡಿದರು . ಆಗ ಗೋಲೀಬಾರ್‌ಗೆ ಆದೇಶ ನೀಡಲಾಯಿತು . ಜನರೆಲ್ಲ ಚೆದುರಿದರು . ರಾತ್ರಿ ಹನ್ನೆರಡು ಘಂಟೆಯವರೆಗೆ ಗಲಭೆ ಮುಂದುವರಿದಿತ್ತು . ಹುಬ್ಬಳ್ಳಿಯಲ್ಲಿ ಸೆಕ್ಷನ್ ೧೪೪ನ್ನು ಜಾರಿಗೊಳಿಸಲಾಯಿತು . ಬೆಳಗಿನ ಜಾವ ನಾಲ್ಕು ಘಂಟೆಯ ವೇಳೆಗೆ ಗಲಭೆಯ ಮುಂಚೂಣಿಯಲ್ಲಿದ್ದವರನ್ನು ಬಂಧಿಸಲಾಯಿತು , ಹುಬ್ಬಳ್ಳಿ ಗಲಭೆಯ ವಿಚಾರವು ರಾಜ್ಯ ಮತ್ತು ರಾಷ್ಟ್ರದ ವಾರ್ತಾ ಪತ್ರಿಕೆಗಳಲ್ಲಿ ಮಾತ್ರವಲ್ಲದೆ , ನ್ಯೂಯಾರ್ಕ್ ಟೈಂಸ್‌ನಲ್ಲೂ ಪ್ರಕಟವಾಯಿತು . ಆ ಸಂದರ್ಭದಲ್ಲಿ ಪಾಟೀಲ ಪುಟ್ಟಪ್ಪ ಆದಿಯಾಗಿ ಆ ಭಾಗದ ಎಲ್ಲ ಪತ್ರಕರ್ತರೂ ಕರ್ನಾಟಕ ಏಕೀಕರಣದ ವಿಚಾರದಲ್ಲಿ ಆಸಕ್ತಿ ಇರಿಸಿಕೊಂಡಿದ್ದರು . ಬಂಧಿತರಾದವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು . ವಶಪಡಿಸಿಕೊಂಡಿದ್ದ ಮುದ್ದೆಮಾಲು ( ಚಪ್ಪಲಿ ಮತ್ತು ಬೂಟುಗಳು ) ಐದು ಗಾಡಿಗಳಷ್ಟು , ಕೆಲವು ಸ್ಥಳೀಯ ಪತ್ರಿಕೆಗಳು ಮಾತ್ರ ಗಲಭೆಯ ವಿಚಾರವನ್ನು ಪ್ರಕಟಿಸಲಿಲ್ಲ . ಬಂಧಿತರಾಗಿದ್ದವರ ಪೈಕಿ ಇಪ್ಪತ್ತು ಜನರ ಮೇಲೆ ಹುಬ್ಬಳ್ಳಿ ಗೋಲೀಬಾರ್ ಕಟ್ಟಲೆ ಎಂದೇ ಹೆಸರು ಪಡೆದ ಮೊಕದ್ದಮೆಯು ಹುಬ್ಬಳ್ಳಿಯ ನ್ಯಾಯಾಲಯದಲ್ಲಿ ಮೂರೂವರೆ ವರ್ಷ ಕಾಲ ನಡೆಯಿತು . ಆರೋಪಿಗಳ ಪರ ವಕೀಲರಾಗಿದ್ದವರು ತರುಣ ವಕೀಲ ಎಸ್ . ಆರ್ . ಬೊಮ್ಮಾಯಿ , ನ್ಯಾಯಾಲಯದಲ್ಲಿ ವಿಚಾರಣೆ ನಡೆದಾಗ ಸರ್ಕಾರದ ಪರ ಸಾಕ್ಷಿಗಳಾಗಿದ್ದವರು ಎಸ್ . ನಿಜಲಿಂಗಪ್ಪ ಮತ್ತು ಹಳ್ಳಿಕೇರಿ ಗುದ್ದೆಪ್ಪ . 

ಬಂದಿತರಾಗಿದ್ದವರ ಹೆಸರುಗಳು ಈ ಕೆಳಕಂಡಂತಿವೆ . ಸರ್ವಶ್ರೀ 
೧. ಬಿ . ಎನ್ . ಮುನವಳ್ಳಿ , ವಕೀಲರು , ಹುಬ್ಬಳ್ಳಿ 
೨ . ಎ . ಜೆ . ಮುಧೋಳ್ , ಭಾರತೀಯ ಕಮ್ಯುನಿಸ್ಟ್ ಪಕ್ಷದ ನಾಯಕ , ಹುಬ್ಬಳ್ಳಿ 
೩ . ಎನ್ . ಕೆ . ಉಪಾಧ್ಯಾಯ , ಬಿಜಾಪುರ 
೪ . ಸಿ . ಜಿ . ಪಾಟೀಲ್ , ಹುಬ್ಬಳ್ಳಿ 
೫ . ಎಂ . ಪಿ . ಲಕ್ಷೇಶ್ವರ್‌ , ಹುಬ್ಬಳ್ಳಿ 
೬ . ಡಿ . ಜಿ . ಮುಲ್ಲಾ , ಹುಬ್ಬಳ್ಳಿ 
೭ . ಸಿದ್ದಪ್ಪ ಕಮಾರ್‌ , ಹುಬ್ಬಳ್ಳಿ 
೮ . ವೀರಭದ್ರಪ್ಪ ಹಳ್ಳಿಕೇರಿ , ಹುಬ್ಬಳ್ಳಿ 
೯ . ಬಿ . ಎನ್ . ಧಾರವಾಡಕರ್ , ಗೋಕಾಕ್
೧೦ . ಚೆನ್ನಪ್ಪ ವಾಲಿ , ಬೈಲಹೊಂಗಲ 
೧೧ . ಮಹದೇವಪ್ಪ ಮುರಗೋಡು ( ದೇವರು ) , ಹುಬ್ಬಳ್ಳಿ ೧೨ . ತಲ್ಲೂರು ರಾಯನಗೌಡ , ಬೈಲಹೊಂಗಲ 
೧೩ , ಚಿನ್ನಯಸ್ವಾಮಿ ಓಂಕಾರಮಠ , ಎಂ . ಕೆ . ಹುಬ್ಬಳ್ಳಿ 
೧೪ . ಶಾಂತಿನಾಥ ಇಂಗಳೆ , ಬೆಳಗಾವಿ 
೧೫ . ಜಾರ್ಜ್ ಅರಳೀಕಟ್ಟಿ , ಬೆಳಗಾವಿ 
೧೬ . ಬಸವಯ್ಯ ಹಿಪ್ಪರಗಿ , ಮಹಾಲಿಂಗಪುರ 
೧೭ . ಮುರುಗಯ್ಯ , ರಬಕವಿ - ಬನಹಟ್ಟಿ 
೧೮ . ರಮಾನಾಥ ಬೆಳವಾಡಿ , ರಾಣೆಬೆನ್ನೂರು 
೧೯ , ತಲ್ಲೂರು ಭಿಂಸೆ , ಹಿರೇಕೆರೂರು 
೨೦ . ಇಟಗಿ ವೇದಮೂರ್ತಿ , ಸಂಪಾದಕರು , ನೇತಾಜಿ ದಿನಪತ್ರಿಕೆ , ಹುಬ್ಬಳ್ಳಿ 

ಮೇಲಿನ ಪಟ್ಟಿಯಲ್ಲಿರುವ ಎಲ್ಲರನ್ನೂ ಮೊದಲಿಗೆ ಹಿಂಡಲಗಾ ಜೈಲಿನಲ್ಲಿ ಇಡಲಾಯಿತು . ನಂತರ ಕೆಲವರನ್ನು ನಾಸಿಕ್ , ಎರವಾಡಾ , ಸಾಬರಮತಿ ಜೈಲುಗಳಲ್ಲಿ ಇಡಲಾಯಿತು . 

ಮೂರು ವರ್ಷಗಳ ಕಾಲ ನಡೆದ ವಿಚಾರಣೆಯು , ಅಂತಿಮವಾಗಿ ವಜಾ ಆಯಿತು . ಹುಬ್ಬಳ್ಳಿಯ ಗಲಭೆಗೆ ಸಂಬಂಧಿಸಿದಂತೆ ಪ್ರತ್ಯೇಕವಾದ ಎರಡು ಮೊಕದ್ದಮೆಗಳು ನಡೆದಿವೆ . ಹುಬ್ಬಳ್ಳಿ ಗಲಭೆಯ ವಿಚಾರಣೆ ನಡೆದದ್ದು ಹುಬ್ಬಳ್ಳಿಯ ನ್ಯಾಯಾಲಯದಲ್ಲಿ . ಆರೋಪಿಗಳ ವಕಾಲತ್ತು ನಡೆಸಿದವರು ಎಸ್ . ಆರ್ . ಬೊಮ್ಮಾಯಿ , 

ಸ್ಥಾನಬದ್ದತಾ ಕಾನೂನಿನ ಮೇಲೆ ೧೯೫೩ರ ಅಗಸ್ಟ್ ೬ರಂದು ಬಂಧಿತರಾಗಿದ್ದ ಆರೋಪಿಗಳ ವಿಚಾರಣೆಯು ಸಲಹಾ ಸಮಿತಿಯ ಮುಂದೆ ಮುಂಬಯಿಯಲ್ಲಿ ನಡೆಯಿತು . ವಿಚಾರಣೆಯ ಸಮಯದಲ್ಲಿ ಮಾತ್ರ ಎಲ್ಲ ಬಂಧಿತರನ್ನೂ ಮುಂಬಯಿಯ ಜೈಲಿಗೆ ವರ್ಗಾಯಿಸಲಾಗುತ್ತಿತ್ತು . ಈ ಪ್ರಕಾರ ಬೆಳಗಾವಿಯ ಕೇಂದ್ರ ಕಾರಾಗೃಹದಲ್ಲಿ ಬಂಧಿತರಾಗಿದ್ದ ಎ . ಜೆ . ಮುಧೋಳ್ ( ಅಬ್ದುಲ್ ರಹಿಮಾನ್ ಜಂಗ್ಲಿಸಾಬ್ ಮುಧೋಳ್ ಉರುಫ್ ನಗರ್ಶಿ ) ಅವರನ್ನು ವಿಚಾರಣೆಯ ಸಂದರ್ಭಕ್ಕೆ ಮುಂಬಯಿಯ ಆರ್ಥರ್ ರೋಡ್ ಕಾರಾಗೃಹಕ್ಕೆ ವರ್ಗಾಯಿಸಲಾಗುತ್ತಿತ್ತು . ವಿಚಾರಣೆ ಮುಗಿದ ನಂತರ ಪುನಃ ಅವರನ್ನು ಬೆಳಗಾವಿಯ ಕಾರಾಗೃಹಕ್ಕೆ ಕಳುಹಿಸಲಾಗುತ್ತಿತ್ತು . ಬಂಧಿತರಾದವರನ್ನು ಎಂದೂ ಒಂದೇ ಕಾರಾಗೃಹದಲ್ಲಿಡದಂತೆ ಎಚ್ಚರ ವಹಿಸಲಾಗಿತ್ತು . 

ಮೊದಲು ನಡೆದದ್ದು ಸ್ಥಾನಬದ್ಧತಾ ಕಾಯ್ದೆಯ ಪ್ರಕಾರ ಬಂದನವಾಗಿದ್ದವರ ವಿಚಾರಣೆ , ಮುಂಬಯಿಯಲ್ಲಿ ನಡೆದ ಈ ವಿಚಾರಣೆಯ ನ್ಯಾಯಾಧೀಶರು ವಾಸುದೇವ್ . ಅಲಿಯ ನ್ಯಾಯಾಲಯದಲ್ಲೂ ವಿಚಾರಣಾಧೀನ ಬಂಧಿತರು ' ಅಕರಾನಿ ಪರಿಷತಿಗೆ ಜಯವಾಗಲಿ ' , ' ಮೊರಾರ್ಜಿ ಮುರ್ದಾಬಾದ್ ' , ' ಕರ್ನಾಟಕ ಏಕೀಕರಣಕ್ಕೆ ಜಯವಾಗಲಿ ' , “ ಕರ್ನಾಟಕ ಏಕೀಕರಣ ಆಗಲೇಬೇಕು ' ಇತ್ಯಾದಿ ಘೋಷಣೆಗಳನ್ನು ಕೂಗುತ್ತಲೇ ಇದ್ದರು . “ ಏಕೀಕರಣ ಏಕೆ ಬೇಕು ? ' ಎಂಬ ನ್ಯಾಯಾಧೀಶರ ಪ್ರಶ್ನೆಗೆ ಆರೋಪಿ ಸ್ಥಾನದಲ್ಲಿದ್ದವರು ನೀಡುತ್ತಿದ್ದ ಉತ್ತರ * ಆಂಧ್ರ ರಾಜ್ಯ ಹೇಗೆ ನಿರ್ಮಾಣ ಆಯೋ ಹಾಗೇ ಕರ್ನಾಟಕಾನೂ ಆಗಬೇಕು . ” 

ಹುಬ್ಬಳ್ಳಿ ಗಲಭೆಯ ವಿಚಾರಣೆ ನಡೆದಾಗ ನ್ಯಾಯಾಲಯಕ್ಕೆ ನಿಜಲಿಂಗಪ್ಪನವರು ಸರಿಯಾಗಿ ಹಾಜರಾಗುತ್ತಿಲ್ಲವೆಂದು ಆರೋಪಿಗಳು ಆಕ್ಷೇಪಿಸಿದ್ದರು . ಮುದ್ದೆಮಾಲಾಗಿದ್ದ ಚಪ್ಪಲಿ ಮತ್ತು ಬೂಟುಗಳನ್ನು ತೋರಿಸಿ , ಅವುಗಳನ್ನು ಗುರುತಿಸಲು ನಿಜಲಿಂಗಪ್ಪನವರಿಗೆ ಸೂಚಿಸಿದರು . ಅದು ಸಾಧ್ಯವಾಗಲಿಲ್ಲ . ವಿಚಾರಣೆ ವಜಾ ಆಯಿತು . 

ಹುಬ್ಬಳ್ಳಿ ಗಲಭೆ ಮತ್ತು ಸ್ಥಾನಬದ್ಧತಾ ಕಾಯ್ದೆಯ ಪ್ರಕಾರ ಬಂಧಿತರಾಗಿದ್ದವರ ಬಗ್ಗೆ ರಾಜ್ಯಸಭೆಯಲ್ಲಿ ಲೋಕಸಭಾ ಸದಸ್ಯ ಬಿ . ವಿ . ಕಕ್ಕಿಲ್ಲಾಯರು ಪ್ರಸ್ತಾಪಿಸಿದ್ದರು . 

ಅ . ಕ . ರಾ . ನಿ . ಪರಿಷತ್ತಿನ ಸಕ್ರಿಯ ಕಾರ್ಯಕರ್ತರಾಗಿದ್ದ ಮಹದೇವಪ್ಪ ಪಟ್ಟಣ್ ಅದರಗುಂಚಿ ಶಂಕರಗೌಡರು ಉಪವಾಸ ಸತ್ಯಾಗ್ರಹ ಮಾಡುವ ಮೊದಲು ಬಳ್ಳಾರಿಯಲ್ಲಿ ಮೂರು ದಿನ ಉಪವಾಸ ಸತ್ಯಾಗ್ರಹ ಮಾಡಿದ್ದರು .

ಕಾಮೆಂಟ್‌ಗಳು

  1. ಇಂದು ನಮ್ಮದೇ ಭಾಗದ ಕೆಲ ಗುಲಾಮ ಜನ ಏಕೀಕರಣದ ಮಹತ್ವ ತ್ಯಾಗ ಹೋರಾಟದ ಬಗ್ಗೆ ತಿಳಿಯದೆ ರಾಜ್ಯ ಒಡೆಯುವ ಬಗ್ಗೆ ಮಾತಾಡುತ್ತಾರೆ. ಮನೆಮುರುಕರು

    ಪ್ರತ್ಯುತ್ತರಅಳಿಸಿ
  2. Hesarige ee bhaaga abhivruddi agilla anta kuntu nepa bere !! idee varshada tookadisuttiddavaru November to galalli eddu bere raajya anta koogaduttiruttaare!!

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹಿಂದಿ ನುಡಿಯ ದಾಸ್ಯ ಸ್ವೀಕರಿಸಿದ ರಾಜ್ಯ ಸರ್ಕಾರದಿಂದಲೇ ನಡೆಯುತ್ತಿದೆ ಕನ್ನಡದ ಕಡೆಗಣನೆ

CAB ಬಗ್ಗೆ ರಾಜಾರಾಂ ತಲ್ಲೂರು ಅವರ ಬರಹವನ್ನು ದಯವಿಟ್ಟು ಓದಿ, ಹಂಚಿಕೊಳ್ಳಿ | ಕನ್ನಡಿಗರಿಗೂ ಸಂಭಂದಿಸಿದೆ ಇದು|

Exploiting the South: How the Central Government Systematically Undermines South Indian States