ಗೋವೆಯ ಸರ್ಕಾರಿ ಸಾರಿಗೆ ಹೆಸರು ಕದಂಬ!

ರ್ನಾಟಕದ ಪ್ರಮುಖ ಕನ್ನಡಿಗ ರಾಜಮನೆತನಗಳಲ್ಲಿ ಒಂದಾದ ಕದಂಬ ರಾಜವಂಶವು ಗೋವೆಯನ್ನು ಆಳಿದ ಪ್ರಮುಖ ರಾಜವಂಶವಾಗಿದೆ . ಅವರ ಆಳ್ವಿಕೆಯಲ್ಲಿ ಕನ್ನಡವೇ ಆಡಳಿತ ಭಾಷೆಯಾಗಿದ್ದು , ತದನಂತರದ ದಿನಗಳಲ್ಲಿ ಇತರರ ಆಳ್ವಿಕೆಗೆ ಒಳಪಟ್ಟಾಗ ಕನ್ನಡದ ಭಾಷೆಯ ಬಳಕೆ ಕ್ರಮೇಣ ಕಡಿಮೆಯಾಯಿತು , ಪೋರ್ಚುಗೀಸರು ಮತ್ತು ಮರಾಠರ ಪ್ರಭಾವದಿಂದಾಗಿ ಕನ್ನಡ ಭಾಷೆಯ ಬಳಕೆ ಕ್ರಮೇಣ ಕಡಿಮೆಯಾಗಿ , ಪೋರ್ಚುಗೀಸ್ ಮತ್ತು ಮರಾಠಿ ಭಾಷೆಗಳು ಆಡಳಿತೆಯಲ್ಲಿ ವ್ಯವಹಾರ ಭಾಷೆಗಳಾಗಿ ಪರಿಣಮಿಸಿದ್ದರೂ ಸುಮಾರು 19ನೇ ಶತಮಾನದ ಅಂತ್ಯದವರೆವಿಗೂ ಕನ್ನಡ ಲಿಪಿ ಗೋವೆಯಲ್ಲಿ ಬಳಕೆಯಲ್ಲಿದ್ದುದನ್ನು ಕಾಣಬಹುದು .


ಕೊಂಕಣಿ ಲಿಪಿಯಿಲ್ಲದ ಒಂದು ಭಾಷೆ , ಮೆಹರ್‌ಚಂದ್ ಮಹಜನರು ಕೊಂಕಣಿ ಒಂದು ಸ್ವತಂತ್ರ ಭಾಷೆಯೆಂದು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ . ಕೊಂಕಣಿ ಭಾಷೆಯಲ್ಲಿರುವ ಅನೇಕ ಕಾಗದ ಪತ್ರಗಳು ಕನ್ನಡ ಲಿಪಿಯಲ್ಲಿರುವುದು ಗೋವಾ ಪತ್ರಾಗಾರದಲ್ಲಿನ ಕೆಲವು ದಾಖಲೆಗಳಿಂದ ತಿಳಿಯುತ್ತದೆ . 1975ರಲ್ಲಿ ಸೂರಿಯಾಜಿ ಆನಂದರಾವ್ ಎಂಬುವರು ಮರಾಠಿ ಭಾಷೆಯನ್ನು ಬಾಲಭೋದ ಮತ್ತು ಮೋಡಿಲಿಪಿಯಲ್ಲಿ ಮಾತ್ರವಲ್ಲದೆ “ ಕನಡಿ ' ಅಥವಾ ಕಾಂದೇವಿ ಲಿಪಿಯಲ್ಲೂ ಬರೆಯಲಾಗುತ್ತಿತ್ತು ಎಂದು ಹೇಳಿದ್ದಾರೆ .

ಕನ್ನಡ ಭಾಷೆ ಮತ್ತು ಕನ್ನಡ ಲಿಪಿಗಳು ಬಹುಕಾಲದಿಂದಲೂ ಆ ಭಾಗಗಳಲ್ಲಿ ಪ್ರಚಲಿತವಿದ್ದು , ಕ್ರಮೇಣ ಕೊಂಕಣಿ , ಮರಾಠಿ ಮತ್ತು ಪೋರ್ಚುಗೀಸ್ ಭಾಷೆಗಳ ಪ್ರಭಾವದಿಂದ ಕನ್ನಡ ಭಾಷೆ ಕಣ್ಮರೆಯಾಗಿ ಲಿಪಿ ಮಾತ್ರ ಉಳಿದಿದ್ದಿರಬಹುದು . ಇದರಿಂದಾಗಿ ಅಲ್ಲಿನ ಅನೇಕ ದಾಖಲೆಗಳು ಕನ್ನಡ ಲಿಪಿಯಲ್ಲೇ ಬರೆಯಲ್ಪಟ್ಟಿವೆ . ಸುಮಾರು 19ನೇ ಶತಮಾನದ ವರೆಗೆ ಕನ್ನಡ ಲಿಪಿಯನ್ನು ಬಳಕೆ ಮಾಡಿರುವ ಅಂಶ ಗೋವಾ ಪತ್ರಾಗಾರದಲ್ಲಿರುವ ಅನೇಕ ದಾಖಲೆಗಳಿಂದ ಕಂಡು ಬರುತ್ತದೆ . ಗ್ರಾಮ ಸಮುದಾಯದ ದಾಖಲೆಗಳು - ದೇವಸ್ಥಾನಕ್ಕೆ ಜಮೀನು ಕೊಟ್ಟ ವಿಷಯದ ದಾಖಲೆಗಳು , ಗ್ರಾಮ ಲೆಕ್ಕ ಪತ್ರಗಳು - ಅಲ್ಲದೆ ಅನೇಕ ಖಾಸಗಿ ಪತ್ರವ್ಯವಹಾರಗಳು ಕನ್ನಡ ಲಿಪಿಯಲ್ಲಿವೆ .

ಕರ್ನಾಟಕದ ಗಡಿಯಲ್ಲಿದ್ದ ಮತ್ತು ಪೋರ್ಚುಗೀಸರ ವಸಾಹತಾಗಿದ್ದ ಗೋವೆ ಕರ್ನಾಟಕದ ಜನ ಜೀವನ ಸಂಸ್ಕೃತಿಗಳ ಮೇಲೆ ತನ್ನದೇ ಆದ ಪ್ರಭಾವ ಬೀರಿದೆ . ಕೆಲವು ಪೋರ್ಚುಗೀಸ್ ಶಬ್ಬಗಳು ಕನ್ನಡ ಭಾಷೆಯಲ್ಲಿ ಸೇರಿರುವುದನ್ನು ಗಮನಿಸಬಹುದು .

ಸಾಬೂನು , ತಂಬಾಕು , ಮೇಜು , ಇಸ್ತ್ರೀ , ಕಾಡತೂಸು , ಲಿಲಾವು - ಮುಂತಾದ ಶಬ್ದಗಳು ಕನ್ನಡದಲ್ಲಿ ಸೇರಿವೆ . ಇದೇ ರೀತಿ ಕನ್ನಡದ ಬಟಗಡಲೆ , ಬಡವ , ಕಾಲು ದಾರಿ , ಕಾರಳುಗಳು ಪೋರ್ಚುಗೀಸ್ ಶಬ್ದಕೋಶದಲ್ಲಿ ಸೇರಿದವು .

ಕನ್ನಡ ಭಾಗಗಳು ಮರಾಠಿಯರ ಆಳ್ವಿಕೆಗೆ ಒಳಪಟ್ಟಾಗ ಆ ಭಾಗಗಳ ಆಡಳಿತ ವ್ಯವಹಾರಗಳಲ್ಲಿ ಹೆಚ್ಚಾಗಿ ಕನ್ನಡವೇ ಬಳಕೆಯಾಗುತ್ತಿತ್ತು . ಮರಾಠರ ಜಹಗೀರಿಯಾಗಿದ್ದ ಬೆಂಗಳೂರನ್ನು ಆಳಿದ ಶಹಜಿ ಮತ್ತು ಅವನ ಮಗ ಏಕೋಜಿ ಇವರಿಬ್ಬರ ಕಾಲದ ಎಲ್ಲ ಶಾಸನಗಳು ಕನ್ನಡದಲ್ಲಿವೆ . ಬೆಂಗಳೂರು ಮಲ್ಲೇಶ್ವರದಲ್ಲಿರುವ ಕಾಡುಮಲ್ಲೇಶ್ವರ ದೇವಸ್ಥಾನದ ಹತ್ತಿರದ ಶಾಸನ ಇದಕ್ಕೊಂದು ಉತ್ತಮ ಉದಾಹರಣೆ . ಕರ್ನಾಟಕದಲ್ಲಿ ದೊರಕುವ ಶಿವಾಜಿಯ ಏಕಮಾತ್ರ ಶಾಸನ ಕನ್ನಡದಲ್ಲಿದ್ದು ಅದು ಧಾರವಾಡ ಜಿಲ್ಲೆಯ ಭದ್ರಾಪುರದಲ್ಲಿದೆ .

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹಿಂದಿ ನುಡಿಯ ದಾಸ್ಯ ಸ್ವೀಕರಿಸಿದ ರಾಜ್ಯ ಸರ್ಕಾರದಿಂದಲೇ ನಡೆಯುತ್ತಿದೆ ಕನ್ನಡದ ಕಡೆಗಣನೆ

CAB ಬಗ್ಗೆ ರಾಜಾರಾಂ ತಲ್ಲೂರು ಅವರ ಬರಹವನ್ನು ದಯವಿಟ್ಟು ಓದಿ, ಹಂಚಿಕೊಳ್ಳಿ | ಕನ್ನಡಿಗರಿಗೂ ಸಂಭಂದಿಸಿದೆ ಇದು|

Exploiting the South: How the Central Government Systematically Undermines South Indian States